ನೆರೆಸಂತ್ರಸ್ತರಿಗೆ ದುಪ್ಪಟ್ಟು ಪರಿಹಾರ ನೀಡಿ: ಕುಮಾರಸ್ವಾಮಿ ಒತ್ತಾಯ
ರಾಯಚೂರು, ಸೋಮವಾರ, 19 ಅಕ್ಟೋಬರ್ 2009( 13:01 IST )
PTI
ನೆರೆ ಸಂತ್ರಸ್ತರಿಗೆ ಈಗ ನೀಡಲಾಗುತ್ತಿರುವ ಪರಿಹಾರ ಏನೇನೂ ಸಾಲದು ಎಂದು ಅಭಿಪ್ರಾಯಪಟ್ಟಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ನೆರೆಯಿಂದ ಉಂಟಾಗಿರುವ ಬೆಳೆನಾಶಕ್ಕೆ ಪ್ರತಿ ಎಕರೆಗೆ ಹತ್ತು ಸಾವಿರ ರೂಪಾಯಿಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಯಚೂರಿನ ಭಾಗದ ನೆರೆ ಸಂತ್ರಸ್ತರಿಗೆ ವಿತರಿಸಲು ಪಕ್ಷದ ವತಿಯಿಂದ ಒಯ್ಯಲಾಗಿದ್ದ ಪರಿಹಾರ ಸಾಮಗ್ರಿಯನ್ನು ವಿತರಿಸಿ, ಅವರ ಅಳಲನ್ನು ಕೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಗಸೂಚಿಯ ಪ್ರಕಾರ ಎಕರೆಗೆ ಕೇವಲ 2 ಸಾವಿರ ರೂಪಾಯಿಗಳ ಪರಿಹಾರ ನೀಡಿಬಿಟ್ಟರೆ ರೈತರ ಬದುಕು ಹಸನಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವು ಪಡೆದುಕೊಳ್ಳುವ ಹೋರಾಟಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಇರುವ ಹಣದಲ್ಲಿ ಮೊದಲು ತುರ್ತು ಪರಿಹಾರವನ್ನಾದರೂ ನೀಡಬಹುದಲ್ಲಾ ಎಂದು ಕುಮಾರಸ್ವಾಮಿ ಆಡಳಿತ ಪಕ್ಷವನ್ನು ಕುಟುಕಿದರು.
ಪರಿಹಾರ ನೀಡಿಕೆ ಸಮರ್ಪಕವಾಗಿಲ್ಲ ಮತ್ತು ಮನೆ ಕಳೆದುಕೊಂಡವರಿಗೆ ಸರಿಯಾಗಿ ಸೂರಿನ ಸಾಮಗ್ರಿಗಳನ್ನು ವಿತರಿಸಲಾಗುತ್ತಿಲ್ಲ ಎಂದು ಆಪಾದಿಸಿದ ಅವರು, ಸಂತ್ರಸ್ತರನ್ನು ಭೇಟಿಮಾಡಲು ಮುಖ್ಯಮಂತ್ರಿಗಳು ಹೊರಟರೆ ಅವರ ಹಿಂದೆ ಸುಮಾರು 60 ವಾಹನಗಳು ಹಿಂಬಾಲಿಸುತ್ತವೆ. ಈ ಪೈಕಿ ಏನಿಲ್ಲವೆಂದರೂ ಸುಮಾರು 40 ವಾಹನಗಳಲ್ಲಿ ಅವರ ಹಿಂಬಾಲಕರೇ ಇರುತ್ತಾರೆ. ಸಂಕಷ್ಟ ಪರಿಸ್ಥಿತಿಗೆ ಸಪ್ತ ಪರಿಹಾರದ ಸೂತ್ರವನ್ನು ಪ್ರಕಟಿಸಿರುವ ಮುಖ್ಯಮಂತ್ರಿಗಳ ಮಿತವ್ಯಯದ ಮಾದರಿ ಸೂತ್ರವಿದು ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಲೇವಡಿ ಮಾಡಿದರು.