ಬೆಳಕಿನ ಹಬ್ಬ, ಪಟಾಕಿಯ ಹಬ್ಬ ಎಂದೇ ಜನಜನಿತವಾದ ದೀಪಾವಳಿಯ ಆಚರಣೆಯ ಸಂದರ್ಭದಲ್ಲಿ ರಾಜಧಾನಿಯಲ್ಲಿ 40ಕ್ಕೂ ಹೆಚ್ಚು ಮಂದಿಗೆ ಕಣ್ಣಿಗೆ ಗಾಯಗಳಾಗಿವೆ.
ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿಯ ವೇಳೆಗೆ 17 ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದು, ಮೂರು ಮಂದಿ ಒಳರೋಗಿಗಳಾಗಿ ದಾಖಲಾಗಿದ್ದಾರೆ. ಏಳು ಮಂದಿ ತೀವ್ರವಾಗಿ ಗಾಯಗೊಂಡವರಾದರೆ, 40ಕ್ಕೂ ಹೆಚ್ಚು ಮಂದಿಗೆ ಕಣ್ಣು ಹಾಗೂ ಕಣ್ಣಿನ ಬಳಿ ಸುಟ್ಟ ಗಾಯಗಳಾಗಿವೆ.
ಗಾಯಗೊಂಡವರ ಪೈಕಿ ನಾಲ್ವರು ಕಣ್ಣು ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದು, ತುರ್ತು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಉಳಿದವರು ಚಿಕಿತ್ಸೆಯ ನಂತರ ಮನೆಗೆ ತೆರಳಿದ್ದಾರೆ. ಪಟಾಕಿ ಸಿಡಿತದಿಂದ ಕಣ್ಣು, ರೆಪ್ಪೆ, ಹುಬ್ಬುಗಳಿಗೆ ಗಾಯಮಾಡಿಕೊಂಡಿರುವ 10ಕ್ಕೂ ಹೆಚು ಮಂದಿ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದರೆ, ತೀವ್ರಸ್ವರೂಪದ ಗಾಯಗಳಾಗಿರುವವರು ಅಲ್ಲಿಯೇ ಉಳಿದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂಗಡಿಯಲ್ಲಿ ಕುಳಿತಿದ್ದ ಇಲಿಯಾಸ್ ಎಂಬ ವೃದ್ಧರಿಗೆ ಯಾರೋ ಹಚ್ಚಿದ ರಾಕೆಟ್ ಒಂದು ಬಡಿದು ಕಣ್ಣಿಗೆ ಗಾಯಗಳಾಗಿವೆ. ಇದೇ ರೀತಿಯಲ್ಲಿ ಕಮಲ್ ಎಂಬ ಬಾಲಕನೂ ಕಣ್ಣಿಗೆ ಗಾಯಮಾಡಿಕೊಂಡಿದ್ದು, ಇಬ್ಬರೂ ಮಿಂಟೋ ಕಣ್ಣಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಗಾಯಗೊಂಡವರಲ್ಲಿ ಮಕ್ಕಳೇ ಹೆಚ್ಚು ಸಂಖ್ಯೆಯಲ್ಲಿದ್ದು, ಅವರ ಪೈಕಿ ವಿಜಯನಗರದ ರುದ್ರಾ ಶೈನಿ ಎಂಬ ಬಾಲಕನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ತುರ್ತು ಚಿಕಿತ್ಸೆಯ ನಂತರ ಈಗ ಚೇತರಿಸಿಕೊಂಡಿದ್ದಾನೆ. ರಾಜಾಜಿನಗರದ ನೀರಜಾಕ್ಷಿ ಎಂಬ ಮಹಿಳೆಗೆ ಹಾರಿದ ರಾಕೆಟ್ ತಗುಲಿದ ಪರಿಣಾಮ ಕಣ್ಣು ಗಾಯಗೊಂಡು, ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದ ನಂತರ ಚೇತರಿಸಿಕೊಡಿದ್ದಾರೆ ಎಂದು ತಿಳಿದುಬಂದಿದೆ.