ಸಂತ್ರಸ್ತರಿಗೆ ಹೆಚ್ಚಿನ ಹಣ ಬಿಡುಗಡೆಗೆ ಒತ್ತಾಯಿಸಿ ಪಾದಯಾತ್ರೆ
ಮೈಸೂರು, ಸೋಮವಾರ, 19 ಅಕ್ಟೋಬರ್ 2009( 16:11 IST )
ಉತ್ತರ ಕರ್ನಾಟಕದ ಭಾಗದ ನೆರೆಪೀಡಿತರಿಗೆ 5 ಸಾವಿರ ಕೋಟಿ ರೂ. ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಜಾಪ್ರಭುತ್ವ ಸಂರಕ್ಷಣಾ ಸಮಿತಿ ಸದಸ್ಯರು ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಿಂದ ಬೆಂಗಳೂರಿನವರೆಗೂ ಪಾದಯಾತ್ರೆ ನಡೆಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದ ಸಮಿತಿಯ ಅಧ್ಯಕ್ಷ ರಾಜೇಶ್, ಕರ್ನಾಟಕದ 14 ಜಿಲ್ಲೆ ಹಾಗೂ ಆಂಧ್ರದ ಒಂದು ಜಿಲ್ಲೆಯಲ್ಲಿ ಪ್ರವಾಹ ಸಂಭವಿಸಿದೆ. ಆದರೆ ಅನುದಾನ ನೀಡಿಕೆಯಲ್ಲಿ ಮಾತ್ರಾ ಮಲತಾಯಿ ಧೋರಣೆ ಅನುಸರಿಸಲಾಗಿದೆ. ಆದ್ದರಿಂದ ಈ ತಾರತಮ್ಯ ಹೋಗಲಾಡಿಸಿ 5 ಸಾವಿರ ಕೋಟಿ ರೂ. ಅನುದಾನ ನೀಡಬೇಕೆಂದು ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳಿಬ್ಬರಿಗೂ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆಯ ಸಂದರ್ಭದಲ್ಲಿ ಯಡಿಯೂರಪ್ಪನವರನ್ನು ಚಿನ್ನತಂಬಿ ಎಂದು ಕರೆದಿದ್ದ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ, ಈಗ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಯಾವುದೇ ನೆರವು ನೀಡಲು ಮುಂದಾಗುತ್ತಿಲ್ಲ ಎಂದೂ ಸಹ ಅವರು ಈ ಸಂದರ್ಭದಲ್ಲಿ ಟೀಕಿಸಿದರು.
ವಿವಿಧ ಸಂಘಟನೆಗಳಿಗೆ ಸೇರಿದ 150ಕ್ಕೂ ಹೆಚ್ಚು ಮುಖಂಡರು, ಪ್ರಗತಿಪರ ಚಿಂತಕರು ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಸುದ್ದಿಗೋಷ್ಠಿಯಲ್ಲಿ ಸಮಿತಿಯ ನಾಗಣ್ಣ, ಪುಟ್ಟಸ್ವಾಮಿ ಇವರೇ ಮೊದಲಾದ ಮುಖಂಡರು ಉಪಸ್ಥಿತರಿದ್ದರು.