ಇತ್ತೀಚೆಗಿನ ಪ್ರವಾಹದಲ್ಲಿ ಮನೆ-ಮಠ ಕಳೆದುಕೊಂಡವರ ಹಾನಿ ಅಂದಾಜು ಮಾಡಲೆಂದು ನಿಯೋಜಿಸಲಾಗಿದ್ದ ನೌಕರರು ಮತ್ತು ಅಧಿಕಾರಿಗಳ 'ಅತೃಪ್ತಿಕರ' ಕೆಲಸ ಮತ್ತು ಪರಿಹಾರ ಧನ ವಿತರಣೆಯಲ್ಲಿ ತಾರತಮ್ಯದ ದೂರುಗಳು ಬಂದಿರುವುದರಿಂದ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಇಬ್ಬರು ಗ್ರಾಮ ಲೆಕ್ಕಿಗರು (ವಿಎ) ಮತ್ತು ಒಬ್ಬ ಜಿ.ಪಂ. ಜೂನಿಯರ್ ಎಂಜಿನಿಯರನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಗದಗ ಜಿಲ್ಲೆಯ ರೋಣ ಮತ್ತು ನಲಗುಂದ ತಾಲೂಕುಗಳಿಗೆ ಭಾನುವಾರ ಭೇಟಿ ನೀಡಿದ ಸಂದರ್ಭ ಮುಖ್ಯಮಂತ್ರಿಗಳು ಸ್ಥಳದಲ್ಲೇ ಈ ಕ್ರಮ ಕೈಗೊಂಡಿದ್ದಾರೆ.
ಹೊಳೆಮನ್ನೂರಿಗೆ ಭೇಟಿ ನೀಡಿದ ಯಡಿಯೂರಪ್ಪ, ಮನೆ ಹಾನಿಗಳನ್ನು ಪರಿಶೀಲಿಸಿ, ಅಲ್ಲಿನವರಿಗೆ ತೀರಾ ಕಡಿಮೆ ಪರಿಹಾರ ಧನ ವಿತರಿಸಲಾಗಿದೆ ಎಂಬುದನ್ನು ಅರಿತುಕೊಂಡರು. ಪರಿಹಾರ ಚೆಕ್‌ಗಳನ್ನು ಪರಿಶೀಲಿಸಿದ ಬಳಿಕ ಅವರು ಅಧಿಕಾರಿಗಳನ್ನು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡರು. ಮನೆ ನಾಶವಾದವರಿಗೆ ಸದ್ಯಕ್ಕೆ ಗರಿಷ್ಠ 35 ಸಾವಿರ ರೂಪಾಯಿ ವಿತರಿಸುವಂತೆ ನಾವು ಈಗಾಗಲೇ ಆದೇಶಿಸಿದ್ದೇವೆ. ಉಳಿದ ಜಿಲ್ಲೆಗಳಲ್ಲಿ ಇದು ಯಥಾವತ್ತಾಗಿ ಪಾಲನೆಯಾದರೆ ಇಲ್ಲೇಕೆ ಆಗಿಲ್ಲ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
ಗೊಂದಲ ತಂದ ಬಂಧನ ಆದೇಶ
ಹೊಳೆ ಮಣ್ಣೂರಿನಲ್ಲೇ ಮತ್ತೊಂದು ಕಡೆ ಯಡಿಯೂರಪ್ಪ ಅವರಂತೂ, ತಾರತಮ್ಯ ಮತ್ತು ಪರಿಹಾರ ವಿತರಣೆಯಲ್ಲಿ ಸಮಸ್ಯೆ ಬಗ್ಗೆ ದೂರುಗಳ ಮಹಾಪೂರವೇ ಕೇಳಿಬಂದಾಗ, ಆಕ್ರೋಶಗೊಂಡು ಅಧಿಕಾರಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಿ ಎಂದು ಪೊಲೀಸ್ ಅಧಿಕಾರಿಗೆ ಆದೇಶಿಸಿರುವುದು ಕ್ಷಣ ಕಾಲ ಗೊಂದಲಕ್ಕೂ ಕಾರಣವಾಯಿತು.
ಪರಿಹಾರ ವಿತರಣೆಯಲ್ಲಿ ಪಕ್ಷಪಾತ ಧೋರಣೆ ಅನುಸರಿಸಲಾಗುತ್ತಿದೆ ಎಂಬ ದೂರುಗಳು ಜನರಿಂದ ಕೇಳಿಬಂದಾಗ ಯಡಿಯೂರಪ್ಪ ಅವರು ಜಿಲ್ಲಾಧಿಕಾರಿ ಎನ್.ವಿ.ಪ್ರಸಾದ್ ಅವರಲ್ಲಿ ವಿವರಣೆ ಕೇಳಿದರು. ಅವರು ನೀಡಿದ ವಿವರಣೆಯಿಂದ ತೃಪ್ತರಾಗಲಿಲ್ಲ. ತಕ್ಷಣವೇ ತಾಳ್ಮೆ ಕಳೆದುಕೊಂಡ ಮುಖ್ಯಮಂತ್ರಿ ಅವರು ಎಸ್ಪಿಯನ್ನು ಕರೆದು, ಅಧಿಕಾರಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಿ ಎಂದು ಆದೇಶಿಸಿದಾಗ ಗೊಂದಲ ಮೂಡಿತು.
ಈ 'ಆದೇಶ'ದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ನಂತರದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ನುಣುಚಿಕೊಂಡರು. ಯಾಕೆಂದರೆ, ದಾಖಲೆಗಳನ್ನು ಪರಿಶೀಲಿಸದೆ ಯಾವುದೇ ಕ್ರಮ ಕೈಗೊಳ್ಳುವಂತಿರಲಿಲ್ಲ.
ಯಾರಿಗೂ ಅನ್ಯಾಯವಾಗದಂತೆ ಪರಿಹಾರ ಧನ ವಿತರಣೆಯಾಗುವುದನ್ನು ನೋಡಿಕೊಳ್ಳುವುದಾಗಿ ಯಡಿಯೂರಪ್ಪ ಅವರು ನೆರೆದ ಸಂತ್ರಸ್ತರಿಗೆ ಭರವಸೆ ನೀಡಿದರು.