ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರಚಾರಕ್ಕಾಗಿ ನಿಯೋಗವನ್ನು ಕೊಂಡೊಯ್ಯಲು ಈಗ ಯಾವುದೇ ಚುನಾವಣೆಯಿಲ್ಲ; ಜನತೆ ಅನುಭವಿಸುತ್ತಿರುವ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಸರಕಾರದೊಂದಿಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.
ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲು ಸಂಪುಟ ಸಹೋದ್ಯೋಗಿಗಳೊಂದಿಗೆ ರಾಜಧಾನಿಗೆ ತೆರಳಿರುವ ಯಡಿಯೂರಪ್ಪ, ಪ್ರತಿಪಕ್ಷಗಳು ತಮ್ಮ ನಡೆಯನ್ನು ಬದಲಾಯಿಸಿಕೊಳ್ಳುವಂತೆ ವಿನಂತಿಸಿದರು.
ಪ್ರವಾಹ ಪೀಡಿತ ಪ್ರದೇಶದಲ್ಲಿನ ಜನ ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೆರೆಯ ಸಂದರ್ಭದಲ್ಲಿ ಒಂದು ವಾರಗಳ ಕಾಲ ನೀರು ನಿಂತ ಕಾರಣ ರಸ್ತೆ, ಕಟ್ಟಗಳು ಸಂಪೂರ್ಣ ನಾಶವಾಗಿವೆ. ಗ್ರಾಮಗಳ ಪುನರ್ ನಿರ್ಮಾಣವಾಗಬೇಕಿದೆ. ನೆಲ, ಭಾಷೆ, ಪ್ರಕೃತಿ ವಿಕೋಪ ಮುಂತಾದ ಸಂದರ್ಭಗಳಲ್ಲಿ ನೀವು ಅಧಿಕಾರದಲ್ಲಿದ್ದಾಗ ನಾವು ಸಂಪೂರ್ಣ ಬೆಂಬಲ ನೀಡಿದ್ದೇವೆ. ನಮ್ಮ ನಿರೀಕ್ಷೆಯೂ ಅದೇ ಆಗಿದೆ. ಇಲ್ಲಿ ಹುಳುಕು ಹುಡುಕಬೇಡಿ ಎಂದು ಯಡಿಯೂರಪ್ಪ ಸಲಹೆ ಮಾಡಿದರು.
ಕರ್ನಾಟಕ ಭವನದಲ್ಲಿ... ಕೇಂದ್ರ ಸಚಿವರುಗಳಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಮತ್ತು ಕೆ.ಎಚ್. ಮುನಿಯಪ್ಪ ಜತೆ ಮುಖ್ಯಮಂತ್ರಿ ನೇತೃತ್ವದ ರಾಜ್ಯ ನಿಯೋಗವು ಭೋಜನ ಕೂಟದಲ್ಲಿ ಪಾಲ್ಗೊಳ್ಳಲಿದೆ. ಇದರಲ್ಲಿ ಕಾರಣಾಂತರಗಳಿಂದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಭಾಗವಹಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಭೇಟಿ.. ಸಂಜೆ ಆರು ಗಂಟೆ ಹೊತ್ತಿಗೆ ಪ್ರಧಾನಿ ಮನಮೋಹನ್ ಸಿಂಗ್‌ರನ್ನು ರಾಜ್ಯ ನಿಯೋಗವು ಭೇಟಿ ಮಾಡಿ, ಹೆಚ್ಚುವರಿ ಪರಿಹಾರದ ಬೇಡಿಕೆ ಸಲ್ಲಿಸಲಿದೆ. ಜತೆಗೆ ಪ್ರವಾಹದ ನಂತರದ ಪರಿಸ್ಥಿತಿಯನ್ನೂ ಕೇಂದ್ರಕ್ಕೆ ವಿವರಿಸಲಿದೆ.
ಅದಕ್ಕೂ ಮೊದಲು 3.45ಕ್ಕೆ ಗೃಹ ಸಚಿವ ಚಿದಂಬರಂ ಮತ್ತು ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರನ್ನು ನಿಯೋಗವು ಭೇಟಿ ಮಾಡಿ ಸಮಾಲೋಚನೆ ನಡೆಸಲಿದೆ. ಮಧ್ಯಾಹ್ನ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿಯವರನ್ನೂ ನಿಯೋಗ ಭೇಟಿ ಮಾಡಲಿದೆ.
ಕೇಂದ್ರವು ನಿಯಮಾವಳಿಗಳನ್ನು ಬದಿಗೊತ್ತಿ ರಾಜ್ಯಕ್ಕೆ ಪರಿಹಾರ ನೀಡುವ ಮೂಲಕ ಸಹಾಯಕ್ಕೆ ಬರಬೇಕು. ಕನಿಷ್ಠ ಒಂದು ಲಕ್ಷ ಮನೆ ನಿರ್ಮಾಣಕ್ಕೆ ಹಣಕಾಸು ಸಹಾಯ ನೀಡಬೇಕು. ಭರವಸೆ ನೀಡಿರುವ ಒಂದು ಲಕ್ಷ ಟನ್ ಅಕ್ಕಿ, ಗೋಧಿ ಮತ್ತು ಸೀಮೆ ಎಣ್ಣೆಯನ್ನು ತಕ್ಷಣವೇ ನೀಡಬೇಕು ಎಂದು ಯಡಿಯೂರಪ್ಪನವರು ಕೇಂದ್ರವನ್ನು ಮನವಿ ಮಾಡಲಿದ್ದಾರೆ.