ಪ್ರವಾಹದ ಸಂಕಷ್ಟದಲ್ಲಿ ಸಿಲುಕಿದ್ದ ಉತ್ತರ ಕರ್ನಾಟಕದ ಜನತೆಗೆ ನೆರವಾಗಲು ಮುಖ್ಯಮಂತ್ರಿ ಯಡಿಯೂರಪ್ಪನವರು ಸರ್ವವಿಧದಲ್ಲೂ ಶ್ರಮಿಸುತ್ತಿದ್ದು, ಇದಕ್ಕೆ ಪ್ರತಿಪಕ್ಷಗಳು ಕೈಗೂಡಿಸಬೇಕೇ ಹೊರತು ರಾಜಕೀಯ ಮಾಡಬಾರದು ಎಂದು ಸಂಸದ ಅನಂತ್ ಕುಮಾರ್ ಸಲಹೆ ನೀಡಿದ್ದಾರೆ.
ನಗರದ ಪ್ರಕಾಶ್ ನಗರ ಬಡಾವಣೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಒಳಾಂಗಣ ಕ್ರೀಡಾಂಗಣ ಸಂಕೀರ್ಣ ಕಟ್ಟಡದ ಗುದ್ದಲಿಪೂಜೆ ಕಾರ್ಯವನ್ನು ನೆರವೇರಿಸಿ ಮಾತನಾಡುತ್ತಿದ್ದ ಅವರು, ಯಡಿಯೂರಪ್ಪನವರ ನೇತೃತ್ವದಲ್ಲಿ ತೆರಳಲಿರುವ ಸರ್ವಪಕ್ಷ ನಿಯೋಗದಲ್ಲಿ ಭಾಗಿಯಾಗುವ ಮೂಲಕ ಪ್ರತಿಪಕ್ಷಗಳು ಸಂತ್ರಸ್ತರಿಗೆ ನೆರವಾಗುವ ಕಾಯಕದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪ್ರಧಾನಿಯವರು ಈಗಾಗಲೇ ರಾಜ್ಯದ ಪ್ರವಾಹಪೀಡಿತ ಪ್ರದೇಶಗಳ ಖುದ್ದು ಸಮೀಕ್ಷೆಯನ್ನು ನಡೆಸಿ ಹೋಗಿರುವುದರ ಜೊತೆಗೆ ಅದರ ಭೀಕರತೆಯನ್ನು ಕಂಡು ಮರುಗಿ ತಾತ್ಕಾಲಿಕ ಪರಿಹಾರವನ್ನು ಘೋಷಿಸಿದ್ದಾರೆ. ಇದೀಗ ಆ ಪ್ರದೇಶಗಳ ಪುನರ್ವಸತಿ ಕಾರ್ಯದ ಹೊಣೆಗಾರಿಕೆ ರಾಜ್ಯಸರ್ಕಾರದ ಮೇಲಿರುವುದರಿಂದ ಅದಕ್ಕೆ ಹೆಚ್ಚಿನ ಹಣಕಾಸಿನ ನೆರವು ಬೇಕಾಗುತ್ತದೆ. ಸರ್ವಪಕ್ಷಗಳು ಈ ನಿಯೋಗದಲ್ಲಿ ಪಾಲ್ಗೊಂಡರೆ ಹಣದ ಹರಿವು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅನಂತ್ ಕುಮಾರ್ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಈ ಹಿಂದೆಲ್ಲಾ ನೆಲ-ಜಲ-ಭಾಷೆಯ ವಿಷಯಗಳು ಎದುರಾದಾಗ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳೂ ಒಗ್ಗಟ್ಟು ಪ್ರದರ್ಶಿಸಿವೆ. ಈಗ ಎದುರಾಗಿರುವ ಸಂಕಷ್ಟದ ಸಮಯದಲ್ಲಿಯೂ ಅದೇ ದೊಡ್ಡತನವನ್ನು ಮೆರೆಯಬೇಕೇ ಹೊರತು ರಾಜಕೀಯ ಮಾಡಬಾರದು ಎಂದು ಅವರು ಇದೇ ಸಂದರ್ಭದಲ್ಲಿ ನುಡಿದರು.