ಉತ್ತರ ಕರ್ನಾಟಕದಲ್ಲಿ 227 ಜನರ ಸಾವು ಹಾಗೂ ಅಪಾರ ಕೃಷಿ ಹಾಗೂ ಇನ್ನಿತರ ನಷ್ಟಕ್ಕೆ ಕಾರಣವಾದ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 8ರವರೆಗಿನ ನೆರೆ ಕುರಿತ ಸಮೀಕ್ಷೆಗೆ ಒಂಬತ್ತು ಸದಸ್ಯರ ಕೇಂದ್ರ ಅಧ್ಯಯನ ತಂಡವು ರಾಜ್ಯಕ್ಕೆ ಆಗಮಿಸಿದೆ.
ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಒ. ರವಿ ನೇತೃತ್ವದ ಈ ತಂಡ ಮೂರು ವಿಭಾಗಗಳಾಗಿ ಕಾರ್ಯ ನಿರ್ವಹಿಸಲಿದೆ. ಬುಧವಾರದಿಂದ ಈ ಮೂರು ತಂಡಗಳು ನೆರೆ ಬಾಧಿತ ಜಿಲ್ಲೆಗಳಿಗೆ ಭೇಟಿ ನೀಡಲಿದ್ದು, ಮೂರು ದಿನಗಳ ಕಾಲ ಸಮೀಕ್ಷೆ ನಡೆಸಲಿವೆ.
ಕೇಂದ್ರದ ಈ ಅಧ್ಯಯನ ತಂಡದಲ್ಲಿ ರವಿ, ವೈ.ಸಿ. ಶರ್ಮಾ, ವಿ.ಪಿ. ಪಸ್ರಾಜ್, ಆರ್.ಕೆ. ಶರ್ಮಾ, ಗುರುಮುಖಿ, ಪಿ. ರಾವುತ್, ಜೇಕಬ್, ಪಿ.ಎಸ್. ಗಂಗಾಧರ ಹಾಗೂ ಟಿ. ಜಿತೇಂದ್ರ ಕುಮಾರ್ ಇದ್ದಾರೆ. ಇವರು ಮೂರು ತಂಡಗಳಲ್ಲಿ ಪ್ರವಾಹ ಬಾಧೆಯನ್ನು ಪರಿಶೀಲನೆ ನಡೆಸಲಿದ್ದು, ರವಿ ನೇತೃತ್ವದ ತಂಡ ಬಳ್ಳಾರಿ, ಕೊಪ್ಪಳ ಹಾಗೂ ಆರ್.ಕೆ. ಶರ್ಮಾ ನೇತೃತ್ವದ ತಂಡ ಗುಲ್ಬರ್ಗಾ, ರಾಯಚೂರು ಹಾಗೂ ಜೇಕಬ್ ನೇತೃತ್ವದ ತಂಡ ಬಾಗಲಕೋಟೆ, ಗದಗ ಜಿಲ್ಲೆಗಳಿಗೆ ತೆರಳಲಿದೆ.
ಅಕ್ಟೋಬರ್ 24ರಂದು ಈ ವಿಶೇಷ ತನಿಖಾ ತಂಡವು ತನ್ನ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಿದೆ. ಇದನ್ನು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಕೃಷಿ ಸಚಿವ ಶರದ್ ಪವಾರ್ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ಉತ್ತರ ಕರ್ನಾಟಕದ 15 ಜಿಲ್ಲೆಗಳಲ್ಲಿ ಕೇಳರಿಯದ ಭಾರೀ ಮಳೆ ಬಂದ ಕಾರಣ ನೆರೆ ಪರಿಸ್ಥಿತಿ ತಲೆದೋರಿ 227 ಮಂದಿ ಸಾವನ್ನಪ್ಪಿದ್ದರು. ಅಲ್ಲದೆ 5.26 ಲಕ್ಷ ಮನೆಗಳು ಕುಸಿದು ಬಿದ್ದಿದ್ದವು. 11.33 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯೂ ಆಗಿತ್ತು.
ರಾಜ್ಯ ಸರಕಾರದ ಪ್ರಾಥಮಿಕ ಅಂದಾಜು ಪ್ರಕಾರ ಪ್ರವಾಹದಿಂದಾಗಿ 17,500 ಕೋಟಿ ರೂಪಾಯಿಗಳ ನಷ್ಟವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ತಕ್ಷಣ 10,000 ಕೋಟಿ ರೂಪಾಯಿಗಳ ಪರಿಹಾರ ನೀಡಬೇಕೆಂದು ಕೇಂದ್ರ ಸರಕಾರವನ್ನು ಕೇಳಿಕೊಂಡಿದ್ದರು.
ಪ್ರವಾಹದ ವೈಮಾನಿಕ ಸಮೀಕ್ಷೆ ನಡೆಸಿದ್ದ ಪ್ರಧಾನಿ ಮನಮೋಹನ್ ಸಿಂಗ್ 1,000 ಕೋಟಿ ರೂಪಾಯಿಗಳ ಪರಿಹಾರ ಪ್ರಕಟಿಸಿದ್ದರು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ನೆರೆ ಪೀಡಿತ ಗ್ರಾಮಗಳ ವೈಮಾನಿಕ ಸಮೀಕ್ಷೆ ಕೈಗೊಂಡಿದ್ದರು.