ಪಂಪನ ಕೃತಿಗಳ ಸಾಂಸ್ಕೃತಿಕ ಅನುಸಂಧಾನದ ಕುರಿತಾದ 2 ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣವೊಂದು ನಗರದಲ್ಲಿ ಆಯೋಜಿಸಲ್ಪಟ್ಟಿದ್ದು, ಕೇಂದ್ರ ಸಾಹಿತ್ಯ ಅಕೆಡೆಮಿ ಹಾಗೂ ಬಿಎನ್ಇಎಸ್ ಕಾಲೇಜಿಗಳ ಸಹಯೋಗದಲ್ಲಿ ಇದು ಜರುಗಲಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.
ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಇದೇ ತಿಂಗಳ 21ರಂದು ಸಂಕಿರಣವು ಪ್ರಾರಂಭವಾಗಲಿದ್ದು ಖ್ಯಾತ ಸಾಹಿತಿ ಹಾಗೂ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಇದನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಕುಲುಪತಿ ಡಾ.ಎನ್.ಪ್ರಭುದೇವ್ ಸಂಕಿರಣದ ಅಧ್ಯಕ್ಷತೆ ವಹಿಸಿದರೆ, ಅಕೆಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಸಂಸ್ಕೃತ ವಿವಿ ವಿಶೇಷಾಧಿಕಾರಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ವಹಿಸಲಿದ್ದು, ಪ್ರೊ.ಹಂಪ ನಾಗರಾಜಯ್ಯ ಈ ಸಂದರ್ಭದಲ್ಲಿ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರೊ. ಅ.ರಾ.ಮಿತ್ರ, ಪ್ರೊ. ಟಿ.ವಿ.ವೆಂಕಟಾಚಲಶಾಸ್ತ್ರಿ, ಪ್ರೊ. ಕಮಲಾ ಹಂಪನಾ, ಪ್ರೊ. ಎನ್. ಬಸವಾರಾಧ್ಯ ಹಾಗೂ ಪ್ರೊ. ಜಿ.ವೆಂಕಟಸುಬ್ಬಯ್ಯ ಇವರೇ ಮೊದಲಾದವರನ್ನು ಸನ್ಮಾನಿಸಲಾಗುವುದು ಎಂದು ತಿಳಿದುಬಂದಿದೆ.