ತನ್ನನ್ನು ಬಲವಂತವಾಗಿ ಯಾರೂ ಮತಾಂತರ ಮಾಡಿಲ್ಲ ಅಥವಾ ಲವ್ ಜಿಹಾದ್‌ಗೆ ಒಳಪಡಿಸಿಲ್ಲ ಎಂದು ಹೇಳಿರುವ ಸೆಲ್ಜಾರಾಜ್, ಇಸ್ಲಾಂ ಕುರಿತು ತಾನು ಆಸಕ್ತಳಾಗಿದ್ದು ಅಧ್ಯಯನ ನಡೆಸುತ್ತಿದ್ದೇನೆ. ಪ್ರೀತಿಸುತ್ತಿರುವ ಮುಸ್ಲಿಂ ಯುವಕನನ್ನು ಶೀಘ್ರದಲ್ಲೇ ನಿಖಾ ಮಾಡಿಕೊಳ್ಳಲಿದ್ದೇನೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾಳೆ.
ಹಲವಾರು ಸಮಯದಿಂದ ಕಾಣೆಯಾಗಿದ್ದ ತನ್ನ ಮಗಳನ್ನು ಹುಡುಕಿಕೊಡುವಂತೆ ಸೆಲ್ಜಾರಾಜ್ ತಂದೆ ಹೇಬಿಯಸ್ ಕಾರ್ಪಸ್ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ, ಆಕೆಯನ್ನು ಹಾಜರುಪಡಿಸುವಂತೆ ಚಾಮರಾಜನಗರ ಪೊಲೀಸರಿಗೆ ಉಚ್ಚ ನ್ಯಾಯಾಲಯ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಸೆಲ್ಜಾರಾಜ್‌ಳನ್ನು ಪೊಲೀಸರು ಬೆಂಗಳೂರು ಹೈಕೋರ್ಟ್‌ನ ವಿಭಾಗೀಯ ಪೀಠದೆದುರು ಹಾಜರುಪಡಿಸಿದ್ದರು.
ಲವ್ ಜಿಹಾದ್ ಆರೋಪ... ಸೆಲ್ಜಾರಾಜ್‌ಳನ್ನು ಕಳೆದ ಕೆಲವು ತಿಂಗಳ ಹಿಂದೆ ಅಪಹರಿಸಿ ಲವ್ ಜಿಹಾದ್ ತತ್ವದೊಂದಿಗೆ ಮತಾಂತರಗೊಳಿಸುವ ಯತ್ನ ನಡೆಸಲಾಗಿದೆ ಎಂದು ಈ ಹಿಂದೆ ಆರೋಪಿಸಲಾಗಿತ್ತು.
ಆಕೆಯನ್ನು ಕೇರಳದ ಆಸ್ಗರ್ ಎಂಬ ಮುಸ್ಲಿಂ ಯುವಕ ಪ್ರೀತಿಸುತ್ತಿದ್ದು, ಸೀಡಿ ಮತ್ತಿತರ ಪರಿಕರಗಳ ಮೂಲಕ ಬ್ರೈನ್‌ವಾಶ್ ಮಾಡಲಾಗಿದೆ. ಆ ಮೂಲಕ ಆಕೆಯನ್ನು ಇಸ್ಲಾಂ ಧರ್ಮವನ್ನು ಅನುಸರಿಸುವಂತೆ ಪ್ರೇರೇಪಿಸಲಾಗಿದೆ ಎಂದು ಹೇಳಲಾಗಿತ್ತು.
ಇದು ನನ್ನಿಚ್ಚೆ ಎಂದ ಸೆಲ್ಜಾರಾಜ್.. ನನ್ನನ್ನು ಇಸ್ಲಾಂನತ್ತ ಯಾರೂ ಬಲವಂತ ಮಾಡಿಲ್ಲ. ಇದು ನನ್ನಿಚ್ಚೆ. ಅಸ್ಗರ್‌ನನ್ನು ನಾನು ಪ್ರೀತಿಸಿದ್ದು, ಇಸ್ಲಾಂ ಧರ್ಮವನ್ನು ಸೇರಿದ ಮೇಲೆ ನಿಖಾ ಮಾಡಿಕೊಳ್ಳಲಿದ್ದೇನೆ. ಇಸ್ಲಾಂ ಧರ್ಮವನ್ನು ಸ್ವೀಕರಿಸುವ ಮೊದಲು ಅದರ ಅಧ್ಯಯನದ ಅಗತ್ಯವಿದೆ. ಕಳೆದ ಒಂದೂವರೆ ತಿಂಗಳುಗಳಿಂದ ನಾನು ಕೇರಳದ ಮದರಸಾ ಒಂದರಲ್ಲಿ ಇಸ್ಲಾಂ ಕುರಿತು ತಿಳಿದುಕೊಳ್ಳುತ್ತಿದ್ದೇನೆ ಎಂದು ಆಕೆಯನ್ನು ಪ್ರಶ್ನಿಸಿದ ನ್ಯಾಯಾಧೀಶರಿಗೆ ಸೆಲ್ಜಾರಾಜ್ ಉತ್ತರಿಸಿದ್ದಾಳೆ.