ರಾಜ್ಯದ ಕಾಂಗ್ರೆಸ್ ನಾಯಕರು ಬಹಿಷ್ಕರಿಸಿದ್ದ ಮುಖ್ಯಮಂತ್ರಿ ನೇತೃತ್ವದ ಸರ್ವಪಕ್ಷ ನಿಯೋಗವನ್ನು ಕೇಂದ್ರದಲ್ಲಿರುವ ಕಾಂಗ್ರೆಸ್ ಸಚಿವರುಗಳು ಸೇರಿಕೊಂಡಿದ್ದರಿಂದ ಕೆಪಿಸಿಸಿ ತೀವ್ರ ಮುಜುಗರಕ್ಕೊಳಗಾಗಿದೆ. ಈ ನಡೆಯನ್ನು ರಾಜಕೀಯ ವಲಯದಲ್ಲಿ ರಾಜ್ಯ ಕಾಂಗ್ರೆಸ್‌ಗೆ ಹಿನ್ನಡೆಯೆಂದೇ ಪರಿಗಣಿಸಲಾಗುತ್ತಿದೆ.
ಹೆಚ್ಚುವರಿ ನೆರೆ ಪರಿಹಾರ ಕುರಿತಂತೆ ಮಂಗಳವಾರ ರಾತ್ರಿ ಗೃಹಸಚಿವರು, ಹಣಕಾಸು ಸಚಿವರು ಮತ್ತು ಪ್ರಧಾನ ಮಂತ್ರಿಗಳನ್ನು ಭೇಟಿಯಾದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ವಪಕ್ಷ ನಿಯೋಗವನ್ನು ಕೇಂದ್ರ ಸಚಿವರು ಸೇರಿಕೊಂಡಿದ್ದರು.
ಇದು ರಾಜ್ಯ ಕಾಂಗ್ರೆಸ್ ಮತ್ತು ರಾಜಧಾನಿಯ ಕಾಂಗ್ರೆಸ್ ನಾಯಕರ ನಡುವೆ ಉಂಟಾದ ಬಿರುಕು ಎಂದು ಬಣ್ಣಿಸಲಾಗುತ್ತಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ಮುಖಭಂಗ ಮತ್ತು ಹಿನ್ನಡೆ ಅನುಭವಿಸಿದ್ದಾರೆ.
ಬೆಂಗಳೂರು ಮತ್ತು ದೆಹಲಿ ನಡುವೆ ಹೊಂದಾಣಿಕೆ ಕೊರತೆಯೂ ಇಲ್ಲಿ ಎದ್ದು ಕಾಣುತ್ತಿದೆ. ಕೇಂದ್ರ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿಯೋಗ ಬಹಿಷ್ಕಾರ ತೀರ್ಮಾನಕ್ಕೆ ರಾಜ್ಯ ಕಾಂಗ್ರೆಸ್ ಬಂದ ಕಾರಣ ತಿರುಗೇಟು ನೀಡಲಾಗಿದೆ ಎಂದೂ ಹೇಳಲಾಗುತ್ತಿದೆ.
ರಾಜ್ಯದ ನಿಯೋಗವನ್ನು ಪ್ರಮುಖ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಹಲವು ಕಾರಣಗಳನ್ನು ಮುಂದಿಟ್ಟು ಬಹಿಷ್ಕರಿಸಿದ್ದವು. ಆದರೆ ನಿಯೋಗವನ್ನು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಕಾನೂನು ಸಚಿವ ವೀರಪ್ಪ ಮೊಯ್ಲಿ ಮತ್ತು ರೈಲ್ವೇ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಸೇರಿಕೊಂಡಿದ್ದರು.
ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ವಿ.ಎಸ್. ಉಗ್ರಪ್ಪ ಸೇರಿದಂತೆ ಪಕ್ಷದ ಹಲವು ಮುಖಂಡರು ನಿಯೋಗದ ವಿರುದ್ಧ ತೊಡೆ ತಟ್ಟಿ ನಿಂತ ಹೊರತಾಗಿಯೂ ಕೇಂದ್ರ ಕಾಂಗ್ರೆಸ್ ನಾಯಕರುಗಳು ತಳೆದ ಈ ನಿಲುವಿನ ಬಗ್ಗೆ ರಾಜ್ಯ ನಾಯಕರು ಅಸಮಾಧಾನ ಹೊಂದಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ರಾಜ್ಯ ನಾಯಕರು ಸೇರಿಕೊಳ್ಳದಿದ್ದರೂ ಕೇಂದ್ರದಲ್ಲಿರುವ ಮುಖಂಡರು ನಿಯೋಗವನ್ನು ಸೇರಿಕೊಂಡ ಬಗ್ಗೆ ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದು, ರಾಜ್ಯ ಸರಕಾರದ ಪ್ರತಿಪಕ್ಷಗಳು 'ವಿರೋಧ ಪಕ್ಷ'ಗಳಾಗಿ ವರ್ತಿಸುತ್ತಿರುವುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.