ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯದ ಕೇಂದ್ರ ಕಾಂಗ್ರೆಸ್ ಸಚಿವರುಗಳಿಗೆ ಸಿಎಂ ಅಭಿನಂದನೆ (Yediyurappa | Congress | Flood | Manmohan Singh)
Feedback Print Bookmark and Share
 
ನಿಯೋಗದಲ್ಲಿ ಭಾಗಿಯಾದ ರಾಜ್ಯದ ಕೇಂದ್ರ ಕಾಂಗ್ರೆಸ್ ಸಚಿವರುಗಳಿಗೆ ಅಭಿನಂದನೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯ ಕಾಂಗ್ರೆಸ್ ಸಚಿವರುಗಳಿಗೆ ಗುದ್ದು ನೀಡಿದ್ದಾರೆ.

ಅಲ್ಲದೆ ಪ್ರತಿಪಕ್ಷಗಳು ನಿಯೋಗವನ್ನು ಬಹಿಷ್ಕರಿಸಿರುವುದು ತನಗೆ ತೀವ್ರ ನೋವನ್ನುಂಟು ಮಾಡಿದೆ ಎಂದಿರುವ ಯಡಿಯೂರಪ್ಪ, ಹಾಗಾಗಬಾರದಿತ್ತು ಎಂದು ಅಭಿಪ್ರಾಯಪಟ್ಟರು.

ಹೆಚ್ಚಿನ ನೆರೆ ಪರಿಹಾರಕ್ಕೆ ಒತ್ತಾಯಿಸಿ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಲು ತೆರಳಿದ್ದ ಮುಖ್ಯಮಂತ್ರಿ ನೇತೃತ್ವದ ನಿಯೋಗವನ್ನು ರಾಜ್ಯ ಕಾಂಗ್ರೆಸ್ ನಾಯಕರು ಬಹಿಷ್ಕರಿಸಿದ್ದರು. ಆದರೆ ಕೇಂದ್ರದಲ್ಲಿನ ಕಾಂಗ್ರೆಸ್ ಸಚಿವರು ನಿಯೋಗವನ್ನು ಸೇರಿಕೊಳ್ಳುವ ಮೂಲಕ ರಾಜ್ಯ ನಾಯಕರಿಗೆ ತೀವ್ರ ಇರಿಸು-ಮುರುಸನ್ನುಂಟು ಮಾಡಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್‌ರನ್ನು ಭೇಟಿಯಾದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ, ನಿಯೋಗದಲ್ಲಿ ಭಾಗಿಯಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಮತ್ತು ಕೆ.ಎಚ್. ಮುನಿಯಪ್ಪರಿಗೆ ಮುಖ್ಯಮಂತ್ರಿಗಳು ಕೃತಜ್ಞತೆ ಸಲ್ಲಿಸಿದರು.

ಪ್ರಧಾನ ಮಂತ್ರಿಯವರನ್ನು ಭೇಟಿಯಾದ ನಿಯೋಗದಲ್ಲಿ ಪಾಲ್ಗೊಳ್ಳುವ ಮೂಲಕ ಕೇಂದ್ರದಲ್ಲಿನ ರಾಜ್ಯದ ಸಚಿವರು ನಮಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇಲ್ಲಿ ರಾಜಕೀಯ ಮತ್ತು ವ್ಯಕ್ತಿ ಪ್ರತಿಷ್ಠೆ ಸಲ್ಲದು ಎಂದು ಇದೇ ಸಂದರ್ಭದಲ್ಲಿ ಅವರು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಕಂಡುಬಂದ ಭಾರೀ ಪ್ರವಾಹದಿಂದ ನೊಂದವರ ಬದುಕಿಗೆ ಸಾಂತ್ವನ ಹೇಳಲು ಅಗತ್ಯವಿರುವ ಸಹಕಾರವನ್ನು ಕೇಂದ್ರದ ಬಳಿ ಕೋರುವ ಕುರಿತು ಸರ್ವಪಕ್ಷ ನಿಯೋಗವನ್ನು ಕರೆದೊಯ್ಯುವ ತೀರ್ಮಾನಕ್ಕೆ ಬರಲಾಗಿತ್ತು. ಆದರೆ ರಾಜ್ಯದ ಪ್ರತಿಪಕ್ಷಗಳು ಸಕಾರಾತ್ಮಕ ಸ್ಪಂದನೆ ತೋರಲಿಲ್ಲ. ನಾಡಿನ ಜನತೆ ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ದುಃಖ ಅನುಭವಿಸುತ್ತಿರುವ ಈ ಹೊತ್ತಿನಲ್ಲಿ ಪಕ್ಷಭೇದ ಮರೆತು ಒಗ್ಗಟ್ಟು ತೋರಿಸಬೇಕಾಗಿತ್ತು ಎಂದು ಯಡಿಯೂರಪ್ಪ ತಿಳಿಸಿದರು.

ಕೇಂದ್ರ ಸರಕಾರವು ಈಗಾಗಲೇ ನೀಡಿರುವ ಪರಿಹಾರವನ್ನು ಮೊದಲು ಸಮರ್ಪಕವಾಗಿ ಬಳಸಿಕೊಳ್ಳಲಿ. ಆ ನಂತರ ಕೇಂದ್ರ ಸರಕಾರದತ್ತ ನಿಯೋಗಗಳನ್ನು ಒಯ್ಯಬಹುದು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಸಿಎಂ ನೇತೃತ್ವದ ನಿಯೋಗವನ್ನು ಬಹಿಷ್ಕರಿಸಿದ್ದನ್ನು ಇದೇ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ