ಬೆಳಗಾವಿಯಲ್ಲಿ ಎಂಇಎಸ್ ನಡೆಸುವ ಮಹಾಮೇಳಾವಕ್ಕೆ ಜಿಲ್ಲಾಡಳಿತ ಈಗಾಗಲೇ ಅನುಮತಿ ನೀಡಿದೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಕನ್ನಡ ಸಂಘಟನೆಗಳು ಕಳವಳಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಎಂಇಎಸ್ ಮಹಾಮೇಳಾವಕ್ಕೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಸಂಬಂಧ ತಾನು ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೊಂದಿಗೆ ಮಾತುಕತೆ ನಡೆಸಿದ್ದೇನೆ. ಯಾರೂ ಆತಂಕಪಡಬೇಕಾಗಿಲ್ಲ ಎಂದು ಚಂದ್ರು ವಿವರಣೆ ನೀಡಿದರು.
ಎಂಇಎಸ್ ಮಹಾಮೇಳಾವಕ್ಕೆ ನೀಡಿರುವ ಅನುಮತಿಯನ್ನು ಹಿಂದಕ್ಕೆ ಪಡೆಯಬೇಕು. ಇಲ್ಲದೇ ಇದ್ದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಎಚ್ಚರಿಕೆ ನೀಡಿದ್ದರು. ಇವರ ನಿಲುವಿಗೆ ವಾಟಾಳ್ ನಾಗರಾಜ್ ಮತ್ತು ಕನ್ನಡದ ಇತರ ಸಂಘಟನೆಗಳು ಕೂಡ ಬೆಂಬಲ ವ್ಯಕ್ತಪಡಿಸಿದ್ದವು.
ಬದಲಾದ ಹೆಸರು.. ಇದೇ ತಿಂಗಳ 26ರಂದು ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ ಮಹಾಮೇಳಾವ ಹೆಸರನ್ನು ಮರಾಠಿ ಸಂಸ್ಕೃತಿ ದರ್ಶನ ಎಂದು ಬದಲಾಯಿಸುವ ಮೂಲಕ ಎಂಇಎಸ್ ಜಾಣತನ ಮೆರೆದಿತ್ತು.
ಮಹಾಮೇಳಾವಕ್ಕೆ ಸರಕಾರ ಅನುಮತಿ ನೀಡದು ಎಂಬುದನ್ನು ಅರಿತುಕೊಂಡಿದ್ದ ಎಂಇಎಸ್ ಹೆಸರು ಬದಲಾವಣೆ ಮಾಡುವ ಮೂಲಕ ಜಿಲ್ಲಾಡಳಿತದಿಂದ ವಾರದ ಹಿಂದೆಯೇ ಸಮ್ಮತಿ ಪಡೆದುಕೊಂಡಿದ್ದರೂ, ಲಿಖಿತ ಅನುಮತಿಯನ್ನು ಪಡೆದುಕೊಂಡಿರಲಿಲ್ಲ.
ಎಂಇಎಸ್ ಹುನ್ನಾರ ಬಯಲಾಗುತ್ತಿದ್ದಂತೆ ಬೆಳಗಾವಿ ಜಿಲ್ಲಾಡಳಿತವು ಎಚ್ಚರವಹಿಸಿದ್ದು, ಅನುಮತಿ ಜವಾಬ್ದಾರಿಯನ್ನು ಸರಕಾರದ ನಿರ್ಧಾರಕ್ಕೆ ಬಿಟ್ಟಿದೆ. ಸರಕಾರದ ನಿರ್ಧಾರ ಇನ್ನೂ ಪ್ರಕಟಗೊಂಡಿಲ್ಲ.
ಏನಿದು ಮಹಾಮೇಳಾವ? ಸಂಕ್ಷಿಪ್ತವಾಗಿ ಹೇಳುವುದಾದರೆ ಕನ್ನಡಿಗರ ವಿರುದ್ಧ ಮರಾಠಿಗರನ್ನು ಎತ್ತಿಕಟ್ಟುವುದು. ಈ ಹಿಂದೆ ಹಲವಾರು ಬಾರಿ ಮಹಾಮೇಳಾವದಲ್ಲಿ ಹಿಂಸಾಚಾರ ನಡೆದ ಹಿನ್ನಲೆಗಳಿವೆ.
ಕರ್ನಾಟಕದಲ್ಲೇ ಮಹಾಮೇಳಾವ ನಡೆಸಿ, ಕನ್ನಡಿಗರ ವಿರುದ್ಧ ಬೈಗುಳಗಳ ಸುರಿಮಳೆಯನ್ನು ಸುರಿಸುವ ಸಮ್ಮೇಳನವಿದು. ಮರಾಠಿಗರ ಮೇಲೆ ಕನ್ನಡಿಗರು ದೌರ್ಜನ್ಯ ನಡೆಸುತ್ತಾರೆ ಎನ್ನುವುದು ಈ ಸಮ್ಮೇಳನದ ಮೂಲಾಂಶ. ನಂತರ ಗಡಿ, ಭಾಷೆ, ಕರ್ನಾಟಕ ಸರಕಾರದ ತಾರತಮ್ಯ ಮುಂತಾದ ಹಲವು ವಿಚಾರಗಳು ಕೂಡ ಎಂಇಎಸ್ ಮೂಲ ಅಜೆಂಡಾ.