ದೇವಸ್ಥಾನಗಳ ಬಾಗಿಲನ್ನು ಮುರಿದು, ಒಳನುಗ್ಗಿ ಕಳವು ಮಾಡಿ ಪರಾರಿಯಾಗುವುದರ ಮೂಲಕ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ತುಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ತ್ಯಾಮಗೊಂಡ್ಲು ಗ್ರಾಮದ ಪ್ರಕಾಶ್ ಹಾಗೂ ಹನುಮಂತರಾಜು ಎಂಬುವವರೇ ಆ ಕಳ್ಳರಾಗಿದ್ದು, ಅವರಿಂದ ಸುಮಾರು 88 ಸಾವಿರ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಇಲ್ಲಿನ ತಿಲಕ್ ಪಾರ್ಕ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.
ಇವರು ತುಮಕೂರಿನ ಬಿ.ಎಚ್. ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಸಂಶಯಗೊಂಡ ಸಿಪಿಐ ಗೌತಮ್ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಅವರಿಬ್ಬರನ್ನು ಬಂಧಿಸಿದ್ದು, ಅವರೊಂದಿಗಿದ್ದ ಕೋಲಾರದ ಸಾದಯ್ಯ ಎಂಬುವವನು ತಪ್ಪಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ತೀವ್ರ ವಿಚಾರಣೆಯ ಸಮಯದಲ್ಲಿ ಕಳ್ಳರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದೇ ಅಲ್ಲದೇ, ಕೋಲಾರ, ಮಂಡ್ಯ ಇವೇ ಮೊದಲಾದ ಜಿಲ್ಲೆಗಳ ಹಲವು ಹಳ್ಳಿಗಳ ದೇವಾಲಯಗಳ ಬಾಗಿಲುಗಳನ್ನು ಮುರಿದು ಚಿನ್ನ-ಬೆಳ್ಳಿ, ದೀಪದ ಕಂಬಗಳು, ನಗದು ಹಣ ಇತ್ಯಾದಿಗಳನ್ನು ದೋಚಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ಈಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.