ಪ್ರವಾಹದಿಂದಾದ ನಷ್ಟವನ್ನು ಅಂದಾಜು ಮಾಡಲೆಂದು ರಾಜ್ಯಕ್ಕೆ ಬಂದಿರುವ ಕೇಂದ್ರದ ಅಧ್ಯಯನ ತಂಡಕ್ಕೆ ಗೌರವ ನೀಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಒ. ರವಿ ನೇತೃತ್ವದ ನೆರೆ ಪರಿಹಾರ ಅಧ್ಯಯನ ತಂಡಕ್ಕೆ ರಾಜ್ಯವು ಪೂರಕ ಮಾಹಿತಿಗಳನ್ನು ನೀಡಬೇಕಾಗಿತ್ತು. ಆದರೆ ನಿರ್ಲಕ್ಷ್ಯವಹಿಸಲಾಗಿದೆ ಎಂದು ದೇಶಪಾಂಡೆ ಹೇಳಿದ್ದಾರೆ.
ಪೂರಕ ಮಾಹಿತಿಗಳನ್ನು ನೀಡುವ ಮೂಲಕ ಅವರಿಗೆ ಪರಿಸ್ಥಿತಿಯನ್ನು ಮನದಟ್ಟು ಮಾಡುವ ಕಾರ್ಯವನ್ನು ಸರಕಾರ ಮಾಡಬೇಕಾಗಿತ್ತು. ಈ ಬಗ್ಗೆ ಯಾವ ಅಧಿಕಾರಿಯೂ ಗಮನ ಹರಿಸಿಲ್ಲ. ಇದು ಸರಕಾರದ ವೈಫಲ್ಯ ಎಂದು ಅವರು ಟೀಕಿಸಿದ್ದಾರೆ.
ರಾಷ್ಟ್ರ ರಾಜಧಾನಿಯಿಂದ ಬಂದಿರುವ ಈ ತಂಡ ಮೂರು ವಿಭಾಗಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಂದಿನಿಂದ ಮೂರು ದಿನಗಳ ಕಾಲ ನೆರೆ ಬಾಧಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಿವೆ.
ಈ ಅಧ್ಯಯನ ತಂಡದಲ್ಲಿ ರವಿ, ವೈ.ಸಿ. ಶರ್ಮಾ, ವಿ.ಪಿ. ಪಸ್ರಾಜ್, ಆರ್.ಕೆ. ಶರ್ಮಾ, ಗುರುಮುಖಿ, ಪಿ. ರಾವುತ್, ಜೇಕಬ್, ಪಿ.ಎಸ್. ಗಂಗಾಧರ ಹಾಗೂ ಟಿ. ಜಿತೇಂದ್ರ ಕುಮಾರ್ ಇದ್ದಾರೆ. ಇವರನ್ನು ತಲಾ ಮೂರು ಸದಸ್ಯರಂತೆ ಮೂರು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತೀ ತಂಡವು ಎರಡೆರಡು ಜಿಲ್ಲೆಗಳನ್ನು ಸಂದರ್ಶಿಸಲಿದೆ.
ರವಿ ನೇತೃತ್ವದ ತಂಡ ಬಳ್ಳಾರಿ, ಕೊಪ್ಪಳ ಹಾಗೂ ಆರ್.ಕೆ. ಶರ್ಮಾ ನೇತೃತ್ವದ ತಂಡ ಗುಲ್ಬರ್ಗಾ, ರಾಯಚೂರು ಹಾಗೂ ಜೇಕಬ್ ನೇತೃತ್ವದ ತಂಡ ಬಾಗಲಕೋಟೆ, ಗದಗ ಜಿಲ್ಲೆಗಳಿಗೆ ತೆರಳಿ ಪ್ರವಾಹ ಬಾಧೆಯನ್ನು ಪರಿಶೀಲನೆ ನಡೆಸಲಿದೆ.
ಸಮೀಕ್ಷೆ ಮುಗಿಸಿದ ನಂತರ ದೆಹಲಿಗೆ ವಾಪಸಾಗುವ ಮೊದಲು ಈ ತಂಡವು ಶುಕ್ರವಾರ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲಿದೆ.