ಬ್ಯಾಂಕ್ ಆಫ್ ಇಂಡಿಯಾದ ಎಟಿಎಂನ ಗಾಜುಗಳನ್ನು ಒಡೆದು, ಲೂಟಿ ಮಾಡಲು ಪ್ರಯತ್ನಿಸಿದುದೇ ಅಲ್ಲದೇ, ಅಲ್ಲಿನ ಕಾವಲುಗಾರನನ್ನು ಹತ್ಯೆಗೈದಿರುವ ಆರೋಪಿಗಳನ್ನು ಪತ್ತೆ ಹಚ್ಚಲು ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ.
ಬ್ಯಾಂಕ್ ಲೂಟಿಯ ಯತ್ನದಲ್ಲಿ ಕಾವಲುಗಾರ ಹಾಗೂ ದುಷ್ಕರ್ಮಿಗಳ ನಡುವೆ ನಡೆದ ಜಟಾಪಟಿಯಲ್ಲಿ ಕಾವಲುಗಾರನನ್ನು ನೀರಿನ ತೊಟ್ಟಿಗೆ ಹಾಕಿ ಉಸಿರುಗಟ್ಟಿ ಸಾಯಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಆರ್.ಟಿ.ನಗರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ದುಷ್ಕರ್ಮಿಗಳು ಬ್ಯಾಂಕ್ ಲೂಟಿ ಮಾಡಿಲ್ಲ ಮತ್ತು ದಾಖಲೆಗಳನ್ನೂ ದೋಚಿಲ್ಲ. ಆದರೆ ಯಾವ ಉದ್ದೇಶದಿಂದ ಕಾವಲುಗಾರನನ್ನು ಕೊಲೆ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಉತ್ತರ ವಿಭಾಗದ ಡಿಸಿಪಿ ರೇವಣ್ಣ ತಿಳಿಸಿದ್ದಾರೆ.
ಬ್ಯಾಂಕ್ ಹಾಗೂ ಎಟಿಎಂ ಕೇಂದ್ರಕ್ಕೆ ಸಿಸಿಟಿವಿಗಳನ್ನು ಅಳವಡಿಸಿರುವುದರಿಂದ ಅವು ಸಂಗ್ರಹಿಸಿರುವ ಚಿತ್ರಗಳನ್ನು ಪರೀಶೀಲಿಸಲಾಗುತ್ತಿದೆ ಎಂದು ತಿಳಿಸಿದ ಅವರು, ಕೊಲೆಯಾದ ಕಾವಲುಗಾರ ಮೋಹನ್ ರಾಜ್ ಶವವನ್ನು ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇಡಲಾಗಿದ್ದು, ವಾರಸದಾರರು ಬಂದ ನಂತರ ಅವರ ವಶಕ್ಕೆ ನೀಡಲಾಗುವುದು ಎಂದು ನುಡಿದಿದ್ದಾರೆ.