ರಸ್ತೆಬದಿಯಲ್ಲಿ ಕುಳಿತಿದ್ದ ಮಹಿಳೆಯೋರ್ವಳ ಮೇಲೆ ಟೆಂಪೋ ವಾಹನವು ಹರಿದ ಪರಿಣಾಮವಾಗಿ ಆಕೆಯು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮುಳಬಾಗಿಲು ತಾಲ್ಲೂಕಿನ ವಡ್ಡಹಳ್ಳಿ ಗ್ರಾಮದ ರತ್ನಮ್ಮ ಎಂಬಾಕೆಯೇ ಆ ದುರದೃಷ್ಟವಂತೆಯಾಗಿದ್ದು, ಅವರಿಗೆ ಪತಿ ಹಾಗೂ ಮೂವರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.
ಮುಳಬಾಗಿಲಿನ ಕೃಷಿ ಮಾರುಕಟ್ಟೆಯಲ್ಲಿನ ತರಕಾರಿಗಳ ಮಂಡಿಗೆ ಬಂದಿದ್ದ ಈಕೆ ಸಾಯಂಕಾಲದ ವೇಳೆಗೆ ಊರಿಗೆ ಹಿಂದಿರುಗಲು ರಸ್ತೆ ಬದಿಯಲ್ಲಿ ಕುಳಿತಿದ್ದರು. ಆ ಸಮಯದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದುದರ ಜೊತೆಗೆ ಬೀದೀದೀಪಗಳು ಇಲ್ಲದ ಕಾರಣ ಕತ್ತಲಾವರಿಸಿತ್ತು. ಈ ಸಮಯದಲ್ಲಿ ಟೆಂಪೋ ಆಕೆಯ ಮೇಲೆ ಹರಿದಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.
ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆಯು ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಪರಾರಿಯಾಗಿರುವ ಟೆಂಪೋ ಚಾಲಕನ ಪತ್ತೆಗೆ ತನಿಖೆ ಪ್ರಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ.