ಪ್ರವಾಹ ಸಂತ್ರಸ್ತ ಜಿಲ್ಲೆಗಳಲ್ಲಿನ ರೈತರ ಕೃಷಿ ಸಾಲವನ್ನು ಮನ್ನಾ ಮಾಡುವ ಕುರಿತು ರಾಜ್ಯ ಸರಕಾರ ಚಿಂತಿಸುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ನೆರೆ ಪೀಡಿತ ಪ್ರದೇಶಗಳ ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, ಅಪಾರ ಬೆಳೆ ನಷ್ಟ ಅನುಭವಿಸಿದ್ದಾರೆ. ಅವರೀಗ ಬ್ಯಾಂಕ್ ಸಾಲಗಳನ್ನು ಮರು ಪಾವತಿ ಮಾಡಲು ಶಕ್ತರಲ್ಲ. ಹಾಗಾಗಿ ಅವರ ಸಾಲಗಳನ್ನು ಮನ್ನಾ ಮಾಡುವ ಅಗತ್ಯವಿದೆ. ಸರಕಾರವು ಈ ಕುರಿತು ಸಮಾಲೋಚನೆ ನಡೆಸುತ್ತಿದ್ದು, ಸಾಲ ಮನ್ನಾಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.
ಪ್ರಧಾನಿಯವರನ್ನು ಭೇಟಿ ಮಾಡಲು ತೆರಳಿದ್ದ ಮುಖ್ಯಮಂತ್ರಿ ನೇತೃತ್ವದ ಸರ್ವಪಕ್ಷ ನಿಯೋಗವು ಈ ಕುರಿತು ಕೇಂದ್ರದ ಗಮನ ಸೆಳೆದಿತ್ತು. ರೈತರ ಸಾಲ ಮನ್ನಾ ಮಾಡಲು ಆರ್ಥಿಕ ಸಹಾಯ ನೀಡುವಂತೆ ನಿಯೋಗ ಕೇಳಿಕೊಂಡಿತ್ತು.
ಬ್ಯಾಂಕುಗಳಿಂದ ಸಾಲ ಮೇಳ.. ಬ್ಯಾಂಕರುಗಳ ಸಭೆಯಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಮುಖ್ಯಮಂತ್ರಿ, ಬ್ಯಾಂಕುಗಳು ನೆರೆ ಪೀಡಿತ ಪ್ರದೇಶಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಒಪ್ಪಿಕೊಂಡಿವೆ; ಈ ಸಂಬಂಧ ಸಾಲ ಮೇಳ ನಡೆಸಲು ಕೂಡ ಬ್ಯಾಂಕುಗಳು ಮುಂದಾಗಿವೆ ಎಂದು ಮಾಹಿತಿ ನೀಡಿದರು.
ಸಂಕಷ್ಟದಲ್ಲಿರುವ ನೆರೆ ಪೀಡಿತರು ಮನೆ ನಿರ್ಮಾಣ ಮತ್ತು ಇತರ ಕಾರ್ಯಗಳಿಗಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕೆಂದು ಬ್ಯಾಂಕುಗಳಿಗೆ ಸರಕಾರ ಮನವಿ ಮಾಡಿತ್ತು. ಇದಕ್ಕೆ ಬ್ಯಾಂಕುಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ. ಎಲ್ಲಿ ಸಾಲ ಮೇಳಗಳನ್ನು ನಡೆಸಬೇಕೆಂದು ಸರಕಾರ ಸೂಚಿಸಲಿದೆ ಎಂದರು.
ಅಲ್ಲದೆ ಸರಕಾರದ ಮನವಿಯನ್ನು ಆಲಿಸಿದ ಬ್ಯಾಂಕುಗಳು, ಸಾಲ ವಸೂಲಾತಿಯನ್ನು ಮುಂದೂಡಿವೆ. ಅಲ್ಲದೆ ಸುಲಭವಾಗಿ ಸಾಲ ನೀಡುವ ಪದ್ಧತಿಯನ್ನು ಅನುಸರಿಸಲು ಬ್ಯಾಂಕುಗಳು ಒಪ್ಪಿಕೊಂಡಿವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.