ರೆಡ್ಡಿ ಸಹೋದರರ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ, ಸಿಎಂ ಧೋರಣೆಯಿಂದ ಬೇಸತ್ತಿರುವ ಬಳ್ಳಾರಿಯ ರೆಡ್ಡಿ ಸಹೋದರರು ಮತ್ತು ಅವರ ಬೆಂಬಲಿಗ ಶಾಸಕ, ಸಚಿವರ ಗುಂಪು ಸೋಮವಾರ ಶಾಸಕ ಕರುಣಾಕರ ರೆಡ್ಡಿ ಅವರ ನಿವಾಸದಲ್ಲಿ ಸಭೆ ನಡೆಸಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವುದರೊಂದಿಗೆ ತಮ್ಮ ಅತೃಪ್ತಿಯನ್ನು ಬಹಿರಂಗಗೊಳಿಸಿದ್ದಾರೆ.
ಸೋಮವಾರ ಸಂಜೆ ದಿಢೀರನೆ ನಗರದಲ್ಲಿರುವ ಶಾಸಕ ಕರುಣಾಕರ ರೆಡ್ಡಿ ಅವರ ನಿವಾಸದಲ್ಲಿ ಸಚಿವ ಜನಾರ್ದನ ರೆಡ್ಡಿ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಗೂಳಿಹಟ್ಟಿ ಶೇಖರ್, ಬಾಲಚಂದ್ರ ಜಾರಕಿಹೊಳಿ, ಆನಂದ್ ಅಸ್ನೋಟಿಕರ್, ಶಾಸಕರಾದ ರಾಜುಗೌಡ, ಆನಂದ್ ಸಿಂಗ್ ಸೇರಿದಂತೆ ಹಲವು ಬೆಂಬಲಿಗ ಶಾಸಕ, ಸಚಿವರು ಭಾಗವಹಿಸಿದ್ದರು.
NRB
ಅದಿರು ಲಾರಿಗಳ ಮೇಲೆ ಹೆಚ್ಚುವರಿ ಸುಂಕ, ಸಿಎಂ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಧಾನಗೊಂಡಿರುವುದು ಒಂದೆಡೆಯಾದರೆ, ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಕಿಡಿಕಾರಿದ್ದಾರೆ. ಮುಖ್ಯಮಂತ್ರಿಗಳು ಶಾಸಕರು, ನಿಷ್ಠಾವಂತ ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತಿರುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ವಿರುದ್ಧವೇ ದೂರು ನೀಡಲು ದೆಹಲಿಗೆ ನಿಯೋಗ ತೆರಳಲು ಸಭೆಯಲ್ಲಿ ಚಿಂತನೆ ನಡೆಸಿದ್ದಾರೆನ್ನಲಾಗಿದೆ. ಅಲ್ಲದೇ, ಪರ್ಯಾಯ ನಾಯಕತ್ವದ ಬಗ್ಗೆಯೂ ಚರ್ಚಿಸಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.
ಮತ್ತೊಂದೆಡೆ ರೆಡ್ಡಿ ಸಹೋದರರ ಬೆಂಬಲಿತ 19ಮಂದಿ ಶಾಸಕರು ಕೂಡ ರಹಸ್ಯವಾಗಿ ಸಭೆ ನಡೆಸುವ ಮೂಲಕ ಬಿಜೆಪಿಯಲ್ಲಿನ ಭಿನ್ನಮತ ಮತ್ತಷ್ಟು ಭುಗಿಲೆದ್ದಂತಾಗಿದೆ.