ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಮ್ಮದೇ ಸರ್ಕಾರದ ಸಚಿವರ ಮೇಲೆ ವಿಶ್ವಾಸವಿಲ್ಲ. ಸಚಿವರಿಗೆ ಮುಖ್ಯಮಂತ್ರಿಗಳ ಮೇಲೆ ಆಸಕ್ತಿಯಿಲ್ಲ. ಹೀಗಿರುವಾಗ ಜನರು ಉತ್ತಮ ಆಡಳಿತವನ್ನು ಕಾಣುವುದಾದರೂ ಹೇಗೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ವಿಷಾದ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಬೆಂಗಳೂರಿನಲ್ಲಿ ಮೂರು ಪ್ರತ್ಯೇಕ ಸೂರುಗಳ ಅಡಿಯಲ್ಲಿ ಶಾಸಕರ ಗುಪ್ತಸಭೆಗಳು ನಡೆಯುತ್ತಿರುವುದನ್ನು ನೋಡಿದರೆ, ಮುಖ್ಯಮಂತ್ರಿ-ಸಚಿವರುಗಳ ನಡುವೆ ಭಿನ್ನಾಭಿಪ್ರಾಯವಿರುವುದು ಹಾಗೂ ಆಡಳಿತಯಂತ್ರವು ಸಂಪೂರ್ಣವಾಗಿ ಕುಸಿದಿರುವುದು ಸ್ಪಷ್ಟವಾಗಿದೆ ಎಂದರು.
ನೆರೆ ಹಾವಳಿಯಿಂದಾಗಿ ರಾಜ್ಯದ ಕೆಲಭಾಗಗಳ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಹೆಚ್ಚು ಚಟುವಟಿಕೆಯಿಂದ ಕೆಲಸ ಮಾಡಬೇಕಿದ್ದ ಮುಖ್ಯಮಂತ್ರಿಗಳು ಈಗ ತಮ್ಮ ಕುರ್ಚಿಯನ್ನೇ ಉಳಿಸಿಕೊಳ್ಳಲು ಹೆಣಗಾಡಬೇಕಾಗಿ ಬಂದಿರುವುದು ವಿಪರ್ಯಾಸ ಎಂದು ಹೇಳಿದರು.
ಅತಿವೃಷ್ಟಿಯಂತಹ ನೈಸರ್ಗಿಕ ವಿಕೋಪದ ಸಮಯದಲ್ಲಿ ಪ್ರತಿಪಕ್ಷಗಳು ಸಹಕರಿಸುತ್ತಿಲ್ಲ ಎಂದು ಮುಖ್ಯಮಂತ್ರಿಗಳೇನೋ ಈ ಹಿಂದೆ ಆರೋಪಿಸಿದ್ದರು. ಈಗ ನೋಡಿದರೆ, ಅವರ ಸಹೋದ್ಯೋಗಿಗಳೇ ಅವರಿಗೆ ಸಹಕಾರ ನೀಡುತ್ತಿಲ್ಲ. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಈ ಬಗೆಯ ಒಂದಲ್ಲಾ ಒಂದುಬಿಕ್ಕಟ್ಟುಗಳನ್ನು ಸೃಷ್ಟಿಸಿಕೊಳ್ಳುತ್ತಲೇ ಇದೆ. ಹೀಗಾದರೆ ಅಭಿವೃದ್ದಿ ಸಾಧ್ಯವೇ ಎಂದು ದೇಶಪಾಂಡೆ ಇದೇ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.