ತಮ್ಮ ಕ್ಷೇತ್ರಕ್ಕೆ ಸೇರಿದ ಮರಳು ಲಾರಿಗಳನ್ನು ಮಾತ್ರ ತಪಾಸಣೆ ಮಾಡಿ ತಲಾ ಲಕ್ಷ ರೂಪಾಯಿ ದಂಡ ವಿಧಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮವಾಗಿ ಮರಳು ಸಾಗಣೆ ಮಾಡುವ ಲಾರಿಗಳನ್ನು ಪತ್ತೆ ಹಚ್ಚಲೆಂದೇ ಸಾರಿಗೆ ಇಲಾಖೆ, ಪೊಲೀಸ್ ಹಾಗೂ ಗಣಿ ಇಲಾಖೆ ಅಧಿಕಾರಿಗಳಿದ್ದಾರೆ. ಆದರೆ, ಮುಖ್ಯಮಂತ್ರಿಗಳು ಮಾತ್ರ ಈ ಜವಾಬ್ದಾರಿಯನ್ನು ಗ್ರಾಮಲೆಕ್ಕಿಗ ಮತ್ತು ತಹಸೀಲ್ದಾರ್‌ಗೆ ವಹಿಸಿದ್ದಾರೆ ಎಂದು ಟೀಕಿಸಿದರು.
ಹೊಳೆನರಸೀಪುರ ವಿಧಾನಸಭೆ ಕ್ಷೇತ್ರಕ್ಕೆ ಸೇರಿದೆ ಎಂಬ ಕಾರಣಕ್ಕೆ ಇತ್ತೀಚೆಗೆ ಮಾಗಡಿ ತಹಸೀಲ್ದಾರ್ ಮತ್ತು ಗ್ರಾಮಲೆಕ್ಕಿಗ ಎರಡು ಲಾರಿಗಳನ್ನು ಹಿಡಿದು ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಕಾನೂನಿನಲ್ಲಿ 25ಸಾವಿರ ರೂಪಾಯಿವರೆಗೆ ಮಾತ್ರ ದಂಡ ವಿಧಿಸಲು ಅವಕಾಶ ಇದೆ. ಈ ಲಾರಿಗಳನ್ನು ಪತ್ತೆ ಹಚ್ಚಿ ಕೂಡಲೇ ಸಂಬಂಧಿಸಿದ ಇಲಾಖೆಗೆ ಒಪ್ಪಿಸುವುದನ್ನು ಬಿಟ್ಟು ಭಾರಿ ಪ್ರಮಾಣದ ದಂಡ ವಿಧಿಸಿದ್ದಾರೆ. ಅಲ್ಲದೇ ಇತರೆ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಿರುವುದರಿಂದ ಅವರಿಬ್ಬರನ್ನೂ ಕೂಡಲೇ ಅಮಾನತು ಮಾಡಬೇಕೆಂದೂ ರೇವಣ್ಣ ಆಗ್ರಹಿಸಿದ್ದಾರೆ.