ಕರ್ನಾಟಕದಲ್ಲಿ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿ ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರ ನಡುವಣ ಜಟಾಪಟಿಯು ದೆಹಲಿಗೆ ರವಾನೆಯಾಗುತ್ತಿರುವಂತೆಯೇ, ಆಂಧ್ರಪ್ರದೇಶದ ಅನಂತಪುರದಲ್ಲಿ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರ ಒಡೆತನದ ಓಬಳಾಂಪುರಂ ಮೈನಿಂಗ್ ಕಂಪೆನಿಯ ಹಿಡಿತದಲ್ಲಿರುವ ಅನಂತಪುರ ಮೈನಿಂಗ್ ಕಂಪನಿ ಗಣಿಗಾರಿಕೆ ಚಟುವಟಿಕೆ ಮುಚ್ಚಿಸಲು ಅರಣ್ಯ ಇಲಾಖೆ ಆದೇಶ ಹೊರಡಿಸಿದೆ ಎನ್ನಲಾಗಿದೆ.
6.5 ಎಕರೆ ಪ್ರದೇಶದಲ್ಲಿ ಜನಾರ್ದನ ರೆಡ್ಡಿ ಒಡೆತನದ ಮೈನ್ಸ್ ಕಂಪನಿಯು 2008ರಿಂದ ಗಣಿಗಾರಿಕೆ ನಡೆಸುತ್ತಿದ್ದು, ಇದು ಅಕ್ರಮ. ಇದಕ್ಕೆ ಸೂಕ್ತ ಅನುಮತಿ ಪಡೆದಿರಲಿಲ್ಲ ಎಂದು ಡಿಎಫ್ಒ ಕೆ.ಬಿಸ್ವಾಸ್ ಅವರು ಸುದ್ದಿ ಚಾನೆಲ್ ಟಿವಿ9 ಗೆ ತಿಳಿಸಿದ್ದಾರೆ.
ಈ ಗಣಿಗಾರಿಕೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾತ್ರ ಅನುಮತಿ ನೀಡಿತ್ತು. ಆದರೆ ಸ್ಥಳೀಯ ವಲಯ ಅರಣ್ಯಾಧಿಕಾರಿಗಳಿಂದ ಮತ್ತು ಮಾಲಿನ ನಿಯಂತ್ರಣ ಮಂಡಳಿಯಿಂದ ಅನುಮತಿ ದೊರೆತಿರಲಿಲ್ಲ.. ಈ ಕುರಿತು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.