ಪಕ್ಷದಲ್ಲಿ ತಲೆದೋರಿರುವ ಆಂತರಿಕ ಭಿನ್ನಮತ ಶನಮಕ್ಕೆ ಸಂಬಂಧಿಸಿದಂತೆ ಬಿ.ಜೆ.ಪಿ ಹೈಕಮಾಂಡ್ ಹಾಗೂ ಜಗದೀಶ್ ಶೆಟ್ಟರ್ ನಡುವೆ ನಡೆದ ಸಂಧಾನ ಕೂಡ ವಿಫಲವಾಗಿದೆ.
ಭಿನ್ನಮತವನ್ನು ಶಮನಗೊಳಿಸುವ ನೆಲೆಯಲ್ಲಿ ದೆಹಲಿಯಲ್ಲಿ ಹೈಕಮಾಂಡ್ ಮತ್ತು ಜಗದೀಶ್ ಶೆಟ್ಟರ್ ಒಂದು ತಾಸಿಗೂ ಹೆಚ್ಚಿನ ಕಾಲ ಮಾತುಕತೆ ನಡೆಸಿದರು ಆದರೆ ಅದು ಯಾವುದೇ ಪ್ರಯೋಜನ ಕಂಡಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮಂತ್ರಿ ಸ್ಥಾನ ಒಪ್ಪಿಕೊಳ್ಳಿ ಎಂಬ ಹೈಕಮಾಂಡ್ ಸೂಚನೆಯನ್ನು ಶೆಟ್ಟರ್ ತಳ್ಳಿ ಹಾಕಿದರು. ರೆಡ್ಡಿ ಸಹೋದರರನ್ನು ನಾವು ನಿಭಾಯಿಸುತ್ತೇವೆ ಹಾಗೂ ಮಾತುಕತೆ ನಡೆಸುತ್ತೇವೆ ಎಂದು ಅರುಣ್ ಜೇಟ್ಲಿ ಸಂಧಾನದ ಮಾತುಕತೆ ವೇಳೆ ಜಗದೀಶ್ ಶೆಟ್ಟರ್ ಅವರಿಗೆ ಮನವರಿಕೆ ಮಾಡಲೆತ್ನಿಸಿದ್ದಾರೆನ್ನಲಾಗಿದೆ.
ಆದರೆ ಯಾರ ಮಾತಿಗೂ ಮಣಿಯದ ಶೆಟ್ಟರ್ ಮೊದಲು ಪ್ರತಿಯೊಬ್ಬ ಶಾಸಕರ ಅಭಿಪ್ರಾಯ ಕೇಳಿ ನಂತರ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಿ ಎಂದು ರಾಜಿ ಮಾತುಕತೆಗೆ ಅಂತ್ಯ ಹಾಡಿದರು.