ಕನ್ನಡ ಚಿತ್ರರಂಗದ ಮೇರುನಟ ಡಾ. ರಾಜ್ ಕುಮಾರ್ ಅವರ ಭಾವಚಿತ್ರದ ಅಂಚೆ ಚೀಟಿಯನ್ನು ಭಾನುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಡುಗಡೆ ಮಾಡಿದ್ದು, ಒಂದು ಗಂಟೆಯಲ್ಲಿಯೇ ಐದು ಸಾವಿರ ಪ್ರತಿಗಳು ಮಾರಾಟವಾಗಿದೆ.
ಆ ನಿಟ್ಟಿನಲ್ಲಿ ಅಣ್ಣಾವ್ರು ಈಗಲೂ ಸಹ ಕನ್ನಡಿಗರ ಆರಾಧ್ಯ ದೈವ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ. ಭಾರತೀಯ ಅಂಚೆ ಇಲಾಖೆ ಹೊರತಂದಿರುವ ರಾಜ್ ಅವರ ನೆನಪಿನ ಅಂಚೆ ಚೀಟಿಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯೋತ್ಸವದ ದಿನದಂದು ಬಿಡುಗಡೆ ಮಾಡಿದ್ದರು.
ಹೊರಗೆ ಕೌಂಟರ್‌ನಲ್ಲಿ ಕಾಯುತ್ತಿದ್ದ ವರನಟನ ಅಭಿಮಾನಿಗಳು ಮರುಕ್ಷಣ್ಣವೇ ಮುಗಿಬಿದ್ದು ಸ್ಟ್ಯಾಂಪ್ ಖರೀದಿಸಿದರು. ಕೆಲವೇ ಕ್ಷಣಗಳಲ್ಲಿ ಅಂಚೆ ಚೀಟಿಗಳೆಲ್ಲ ಖಾಲಿಯಾದವು !
ಡಾ.ರಾಜ್ ನೆನಪಿನ ಅಂಚೆ ಚೀಟಿ ಹೊರತರುವ ಮುಲಕ ನಟ ಸಾರ್ವಭೌಮ ಕಲಾ ಪ್ರಪಂಚಕ್ಕೆ ನೀಡಿರುವ ಅಮೂಲ್ಯ ಕೊಡುಗೆ ಸ್ಮರಿಸಿಕೊಳ್ಳುವ ಅವಕಾಶವನ್ನು ನನಗೆ ಅಂಚೆ ಇಲಾಖೆ ಕಲ್ಪಿಸಿದೆ ಎಂದು ಮೂಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ನಂದಿನಿ ಬಡಾವಣೆ ಬಳಿ ಅಮೃತ ಮಹೋತ್ಸವ ಭವನ ನಿರ್ಮಾಣಕ್ಕೆ ಬಿ.ಡಿ.ಎ ನಿವೇಶನ ನೀಡಲಿದೆ ಎಂದು ಸಿ.ಎಂ ಇದೇ ಸಂದರ್ಭದಲ್ಲಿ ನುಡಿದರು.