ರಾಜ್ಯದಲ್ಲಿ ಕೆಲ ದಿನಗಳಿಂದ ನಡೆದಿರುವ ರಾಜಕೀಯ ಬೆಳವಣಿಗೆಗಳಿಂದ ಉಂಟಾಗಿರುವ ಗೊಂದಲಗಳಿಗೆ ರಾಜ್ಯದ ಜನತೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕ್ಷಮೆ ಯಾಚಿಸಿದ್ದಾರೆ.
ನವಗ್ರಾಮ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲು ಬಾಗಲಕೋಟೆಯ ಶಿರಬಡಗಿಗೆ ತೆರಳುವ ಮುನ್ನ ನಗರದ ಜಕ್ಕೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿನ ರಾಜಕೀಯ ಗೊಂದಲಗಳಿಗೆ ರಾಜ್ಯದ ಜನತೆಯ ಕ್ಷಮೆ ಯಾಚಿಸುತ್ತಿರುವುದಾಗಿ ಹೇಳಿದರು. ರಾಜಕೀಯ ಬಿಕ್ಕಟ್ಟಿನ ಕುರಿತು ಕಳೆದ ನಾಲ್ಕೈದು ದಿನಗಳಿಂದಲೂ ಸಿಎಂ ವಿವಾದವನ್ನು ಅಲ್ಲಗಳೆಯುತ್ತಲೇ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ರಾಜ್ಯದ ಇತ್ತೀಚಿನ ಗೊಂದಲಗಳಿಂದ ಜನತೆ ಬೇಸರ ಮಾಡಿಕೊಳ್ಳುವುದು ಬೇಡ ಎಂದು ಮನವಿ ಮಾಡಿದ ಮುಖ್ಯಮಂತ್ರಿಗಳು, ಇನ್ನೆರಡು ದಿನಗಳಲ್ಲಿ ಈ ಎಲ್ಲಾ ಗೊಂದಲಗಳು ಪರಿಹಾರವಾಗಲಿದೆ ಎಂದರು.