ಇನ್ನೆರಡು ದಿನದಲ್ಲಿ ಸತ್ಯಾಂಶ ಹೊರಹಾಕ್ತೇನೆ: ರೇಣುಕಾಚಾರ್ಯ
ಶೋಭಾ ಕರಂದ್ಲಾಜೆ ಸೂಪರ್ ಸಿಎಂ...
ಹೈದರಾಬಾದ್, ಸೋಮವಾರ, 2 ನವೆಂಬರ್ 2009( 17:28 IST )
NRB
'ಸೂಪರ್ ಸಿಎಂ ತರ ವರ್ತಿಸುತ್ತಿರುವ ಶೋಭಾ ಕರಂದ್ಲಾಜೆ ಹಾಗೂ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಬಳಿಗಾರ್ ಅವರನ್ನು ಇನ್ನೂ ಬದಲಿಸಲಿಕ್ಕೆ ಆಗ್ಲಿಲ್ಲ ಅಂದ್ರೆ ಏನರ್ಥ ಎಂದು ಕಿಡಿಕಾರಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ, ನಾವು ಯಾವಾಗಲೂ ಪಕ್ಷಕ್ಕೆ ನಿಷ್ಠರು. ಆದರೆ ತಮ್ಮ ಬೇಡಿಕೆ ಈಡೇರಿಸಲೇಬೇಕು ಎಂದು ಪಟ್ಟು ಹಿಡಿದ್ದಾರೆ.
ಸೋಮವಾರ ಹೈದರಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಕೊಟ್ಟಿರುವ ಖಾತೆಯನ್ನು ಸಮರ್ಥವಾಗಿ ನಿಭಾಯಿಸದೆ ಬೇರೆ ಇಲಾಖೆಗಳಿಗೆ ಹಸ್ತಕ್ಷೇಪ ಮಾಡುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲಾಗಿದ್ದಾರೆ. ಇದನ್ನು ಒಪ್ಪಿಕೊಂಡು ಶೋಭಾ ಕರಂದ್ಲಾಜೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಅಲ್ಲದೆ, ಸಮ್ಮಿಶ್ರ ಸರ್ಕಾರ ರಚನೆ ವೇಳೆಯಲ್ಲೂ ನಾವೆಲ್ಲ ಯಡಿಯೂರಪ್ಪ ಅವರೊಂದಿಗೆ ಇದ್ದೇವು. ಯಡಿಯೂರಪ್ಪ ಪಕ್ಷಾಂತರ ಮಾಡಲು ಹೋದಾಗಲೂ ಕೂಡ ಅವರ ಜತೆಗಿದ್ದೇವು. ಆದರೆ ಇದೀಗ ಸಿಎಂ ಜತೆ ಬೇರೆ ಯಾರೋ ಬಂದಿದ್ದಾರೆ. ಆ ಬಗ್ಗೆ ಇನ್ನೆರಡು ದಿನಗಳಲ್ಲಿ ರಾಜ್ಯದ ಜನತೆಗೆ ಸತ್ಯವನ್ನು ಬಹಿರಂಗ ಮಾಡುತ್ತೇನೆ ಎಂದು ರೇಣುಕಾಚಾರ್ಯ ಗುಡುಗಿದ್ದಾರೆ.
ನಾಯಕತ್ವ ಬದಲಾವಣೆ ಕುರಿತು ಪಕ್ಷದ ಹೈಕಮಾಂಡ್ ಹಿಂದೆ-ಮುಂದೆ ನೋಡುತ್ತಿದೆ. ಈ ನಿಟ್ಟಿನಲ್ಲಿ ಕೂಡಲೇ ಅತೃಪ್ತ ಶಾಸಕರ ಮಾಹಿತಿಯನ್ನು ಕಲೆ ಹಾಕಿ ನಾಯಕತ್ವ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಭಿನ್ನಮತ ಶಾಸಕರ ಪಟ್ಟಿ ನಮಗೆ ಬೇಡ, ಪಕ್ಷವನ್ನು ಬೆಳೆಸುವುದು ನಮ್ಮ ಉದ್ದೇಶ. ಆದರೆ, ಮೊದಲು ನಾಯಕತ್ವ ಬದಲಾಯಿಸಬೇಕು. ಈ ಬಗ್ಗೆ ಹೈಕಮಾಂಡ್ ಗಮನ ಹರಿಸಬೇಕು ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು.