ಕರ್ನಾಟಕ ಆಡಳಿತಾರೂಢ ಪಕ್ಷದಲ್ಲಿ ಉದ್ಭವಿಸಿರುವ ಬಂಡಾಯ ಶಮನಕ್ಕಾಗಿ ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ಅವರು ಸೋಮವಾರ ಸಚಿವ ಜನಾರ್ದನ ರೆಡ್ಡಿ ಅವರೊಂದಿಗೆ ನಡೆಸಿದ ಮಾತುಕತೆ ಕೂಡ ವಿಫಲವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ.
ಅರುಣ್ ಜೇಟ್ಲಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ರಾಜ್ಯಕ್ಕೆ ಉತ್ತಮ ನಾಯಕನ ಅಗತ್ಯವಿರುವುದನ್ನು ಪಕ್ಷದ ವರಿಷ್ಠರಿಕೆ ಮನವರಿಕೆ ಮಾಡಿಕೊಟ್ಟಿದ್ದೇನೆ. ನಮಗೆ ಯಾರೊಂದಿಗೂ ವೈಯಕ್ತಿಕ ದ್ವೇಷವಿಲ್ಲ. ನಾಯಕತ್ವ ಬದಲಾವಣೆ ಪ್ರಶ್ನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದರು.
ಮಾತುಕತೆ ವೇಳೆಯಲ್ಲಿ ತಮ್ಮ ಪಟ್ಟನ್ನು ಸಡಿಲಿಸದ ಪರಿಣಾಮ ಪಕ್ಷದ ವರಿಷ್ಠರಾದ ಜೇಟ್ಲಿ, ರಾಜ್‌ನಾಥ್ ಸಿಂಗ್, ಸುಷ್ಮಾ ಸ್ವರಾಜ್ ಇದೀಗ ಅಡ್ವಾಣಿ ಅವರ ಮನೆಗೆ ದೌಡಾಯಿಸಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಐದು ವರ್ಷ ಆಡಳಿತ ನಡೆಸುವುದಲ್ಲ, 50ವರ್ಷವೂ ಬಿಜೆಪಿ ಅಧಿಕಾರ ನಡೆಸಬೇಕು ಎನ್ನುವುದು ನಮ್ಮ ಬೇಡಿಕೆ. ಈ ಕಾರಣಕ್ಕೆ ನಾಯಕತ್ವ ಬದಲಾವಣೆ ಮಾಡಬೇಕು ಎಂಬ ಸಂಗತಿಯನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿರುವುದಾಗಿ ಹೇಳಿದರು.
ಸುಷ್ಮಾ ಸ್ವರಾಜ್ ಅವರೊಂದಿಗೂ ಮಾತುಕತೆ ನಡೆಸಲಾಗಿದೆ. ಅವರಿಗೂ ರಾಜ್ಯದ ವಿದ್ಯಮಾನಗಳ ಕುರಿತು ವಿವರಿಸಿರುವುದಾಗಿ ಹೇಳಿದ ಅವರು, ಸುಷ್ಮಾ ಅವರು ನನಗೆ ತಾಯಿ ಸಮಾನ ಎಂದರು. ಏತನ್ಮಧ್ಯೆ ಭಿನ್ನಮತೀಯರ ಕೆಂಗಣ್ಣಿಗೆ ಗುರಿಯಾಗಿರುವ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಸುಷ್ಮಾ ಸ್ವರಾಜ್ ಸೂಚಿಸಿದ್ದಾರೆಂದು ಮೂಲವೊಂದು ತಿಳಿಸಿದೆ. ಆದರೆ, ಶೋಭಾ ಅವರನ್ನು ಯಾವುದೇ ಕಾರಣಕ್ಕೂ ಸಂಪುಟದಿಂದ ತೆಗೆಯುವುದಿಲ್ಲ ಎಂದು ಯಡಿಯೂರಪ್ಪ ಅವರು ಪಟ್ಟು ಹಿಡಿದಿರುವ ಪರಿಣಾಮ ರಾಜ್ಯ ರಾಜಕಾರಣ ಡೋಲಾಯಮಾನ ಸ್ಥಿತಿಗೆ ತಲುಪಿದೆ.
ಯಡಿಯೂರಪ್ಪ ನಾಯಕತ್ವಕ್ಕೆ ಧಕ್ಕೆ ಇಲ್ಲ: ರಾಜ್‌ನಾಥ್
ಜೇಟ್ಲಿ ಹಾಗೂ ಜನಾರ್ದನ ರೆಡ್ಡಿ ನಡುವೆ ನಡೆದ ಮಾತುಕತೆ ವಿಫಲವಾದ ನಂತರ, ಪಕ್ಷದ ರಾಷ್ಟ್ರಾಧ್ಯಕ್ಷ ರಾಜ್‌ನಾಥ್ ಸಿಂಗ್ ಹಿರಿಯ ಮುಖಂಡರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನಾಯಕತ್ವಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಕ್ಕಟ್ಟನ್ನು ಶೀಘ್ರವೇ ಪರಿಹರಿಸುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಮತ್ತೊಂದು ಸುತ್ತಿನ ಮಾತುಕತೆ: ಜೇಟ್ಲಿಯೊಂದಿಗೆ ಜನಾರ್ದನ ರೆಡ್ಡಿ ಮಾತುಕತೆ ವಿಫಲವಾದ ನಂತರ, ರಾಜ್‌ನಾಥ್ ಸಿಂಗ್, ಸುಷ್ಮಾ, ಅನಂತ್ ಕುಮಾರ್ ಒಂದು ಸುತ್ತಿನ ಮಾತುಕತೆ ನಡೆಸಿದ್ದರು. ಇದೀಗ ಆಡ್ವಾಣಿ ಅವರ ನಿವಾಸದಲ್ಲಿ ರಾಜ್‌ನಾಥ್, ಸುಷ್ಮಾ, ಅನಂತ್ ಕುಮಾರ್, ಜೇಟ್ಲಿ ಸೇರಿದಂತೆ ಪಕ್ಷದ ವರಿಷ್ಠರು ಬಿಕ್ಕಟ್ಟು ಶಮನಕ್ಕಾಗಿ ಮತ್ತೊಂದು ಸುತ್ತಿನ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.