ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರೆಡ್ಡಿ ಸಹೋದರರು ರಾಜ್ಯದ ಜನರನ್ನು ಮೂರ್ಖರೆಂದು ತಿಳಿದಿದ್ದಾರೆ. ಇವರಿಗೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಡಿಯೂರಪ್ಪ ಇನ್ನೂ 10ವರ್ಷ ಸಿಎಂ ಆಗಿ ಮುಂದುವರಿಯುವ ಮಾತನ್ನಾಡಿದರೆ, ಸಾವಿರಾರು ಕೋಟಿ ರೂಪಾಯಿ ವೆಚ್ಚವಾದರೂ ಸರಿ, ನಾಯಕತ್ವ ಬದಲಾಗಲೇಬೇಕು ಎಂದು ರೆಡ್ಡಿ ಸಹೋದರರು ಪಟ್ಟು ಹಿಡಿದಿದ್ದಾರೆ. ಯಡಿಯೂರಪ್ಪಗೆ ಒಂದೂವರೆ ವರ್ಷದಲ್ಲೇ ಅಧಿಕಾರ ಮದ ತಲೆಗೆ ಏರಿದೆ. ಇನ್ನು ರೆಡ್ಡಿ ಸಹೋದರರಿಗೆ ಹಣದ ಮದ. ಅದಕ್ಕೇ ಈ ರೀತಿ ಮಾತನಾಡುತ್ತಿದ್ದಾರೆ. ಈ ಇಬ್ಬರೂ ರಾಜ್ಯದ ಜನರು ಮೂರ್ಖರೆಂದು ತಿಳಿದಂತಿದೆ. ಸಮಯ ಬಂದಾಗ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ನನ್ನ ಬಳಿ 60ಶಾಸಕರಿದ್ದಾರೆ ಎಂದು ರೆಡ್ಡಿ ಬಣ ಹೇಳುತ್ತಿದ್ದರೆ, ಇತ್ತ ಸಿಎಂ ಬಣ ತಮಗೆ 85ಶಾಸಕರ ಬೆಂಬಲ ಇದೆ ಎಂದು ಸಾರುತ್ತಿದ್ದಾರೆ. ರಾಜಕೀಯ ಮೇಲಾಟ ಸ್ವಾರ್ಥ ಸಾಧನೆಗೇ ಹೊರತು ರಾಜ್ಯ ಜನ ಕಲ್ಯಾಣಕ್ಕಾಗಿ ಅಲ್ಲವೇ ಅಲ್ಲ. 60ವರ್ಷ ನಾವೂ ಸರ್ಕಾರ ನಡೆಸಿದ್ದೇವೆ. ಒಮ್ಮೆಯೂ ಹೀಗೆ ಕಚ್ಚಾಡಿಲ್ಲ. ಪರಸ್ಪರ ಅಪನಂಬಿಕೆಯೇ ಬಿಜೆಪಿಯನ್ನು ಸುಡುತ್ತಿದೆ ಎಂದರು.