ರಾಜ್ಯ ಸರ್ಕಾರದ ವೈಫಲ್ಯ ಮತ್ತು ಅಕ್ರಮ ಗಣಿಗಾರಿಕೆಯನ್ನು ಸಿಬಿಐ ವಶಕ್ಕೆ ಒಪ್ಪಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಶನಿವಾರ ನಗರದ ಬನ್ನಪ್ಪ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿತು.
ಸಂವಿಧಾನಬದ್ಧ ಅಧಿಕಾರ ನಿರ್ವಹಿಸುವಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಫಲರಾಗಿದ್ದಾರೆ ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತ ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಗಣಿಗಾರಿಕೆ ಮೂಲಕ ರೆಡ್ಡಿ ಸಹೋದರರು ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಿದರೂ ಕೂಡ ಸರ್ಕಾರ ಮೌನ ವಹಿಸಿದೆ. ಸಚಿವತ್ರಯರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕೆಂದು ಅವರು ಒತ್ತಾಯಿಸಿದರು.
ರಾಜ್ಯದ ಜನತೆಯ ಹಾದಿ ತಪ್ಪಿಸುವ ಮೂಲಕ ಯಡಿಯೂರಪ್ಪ ಜನರಿಗೆ ಮಹಾದ್ರೋಹ ಎಸಗಿದ್ದಾರೆ. ರಾಜ್ಯದ ಅರಣ್ಯಭಾಗದಲ್ಲಿಯೇ ಅತೀ ಹೆಚ್ಚು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಕೂಡ ಯಾವುದೇ ಕ್ರಮಕೊಳ್ಳುತ್ತಿಲ್ಲ ಎಂದು ಆಪಾದಿಸಿದರು. ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುವುದರೊಂದಿಗೆ ಸಿಎಂ ತಮ್ಮ ಭಂಡತನ ಪ್ರದರ್ಶಿಸಿದ್ದಾರೆ ಎಂದರು.
ಅಕ್ರಮ ಗಣಿಗಾರಿಕೆಯನ್ನು ಮುಖ್ಯಮಂತ್ರಿಗಳು ಸಿಬಿಐ ತನಿಖೆಗೆ ಒಪ್ಪಿಸಬೇಕು, ಇಲ್ಲವಾದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸಿದ್ದು ಗುಡುಗಿದ್ದಾರೆ.