ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಬಯಸಿದ್ದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತಂತೆ ತನಿಖೆ ಆಗಮಿಸುವ ಸಿಬಿಐಗೆ ತಾವೂ ಕೂಡ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಆದರೆ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ವಿಧಾನಮಂಡಲದ ಅಧಿವೇಶನದಲ್ಲಿಯೇ ಚರ್ಚಿಸುವುದಾಗಿ ಹೇಳಿದರು.
ಅಕ್ರಮ ಗಣಿಗಾರಿಕೆ ಕುರಿತಂತೆ ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸದಿದ್ದರು ಕೂಡ, ಸಿಬಿಐ ಬಯಸಿದ್ದಲ್ಲಿ ತನಿಖೆಗೆ ಸಹಕರಿಸುತ್ತೇನೆ. ನಾವು ಯಾವುದೇ ರೀತಿಯಲ್ಲಿಯೂ ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಹಾಗಾಗಿ ಪಾರದರ್ಶಕವಾಗಿರುವ ನಾವು ಸಿಬಿಐಗೆ ಎಲ್ಲ ದಾಖಲೆಗಳನ್ನು ನೀಡಲು ಸಿದ್ಧ ಎಂದರು.
ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಆಂಧ್ರಪ್ರದೇಶ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ, ತನಿಖೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಇದೀಗ ಸಿಬಿಐ ಕರ್ನಾಟಕ ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮಗಳ ಕುರಿತು ತನಿಖೆ ಆರಂಭಿಸಿದೆ. ಇದರಲ್ಲಿ ಕರ್ನಾಟಕದಲ್ಲಿಯೂ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಈ ಬಗ್ಗೆಯೂ ಸಿಬಿಐ ಮಾಹಿತಿ ಕಲೆ ಹಾಕಲಿದೆ.