ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನೇಣಿಗೇರಿಸಿ ಹೇಳಿಕೆ-ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಕುಮಾರಸ್ವಾಮಿ (Kumaraswamy | High court | Karnataka | JDS | Ashok harnalli)
ರಾಜ್ಯ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಅವರನ್ನು ನೇಣಿಗೇರಿಸಬೇಕೆಂಬ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕೆಂಬ ರಾಜ್ಯ ವಕೀಲರ ಪರಿಷತ್ ಎಚ್ಚರಿಕೆಯನ್ನು ತಿರಸ್ಕರಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರಜಾಪ್ರಭುತ್ವದಲ್ಲಿ ಸರಿ-ತಪ್ಪನ್ನು ಟೀಕಿಸುವ ಹಕ್ಕು ಎಲ್ಲರಿಗೂ ಇದೆ ಎಂದು ಸಮರ್ಥನೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇನು ಅಡ್ವೊಕೇಟ್ ಜನರಲ್ ಹಾರ್ನಳ್ಳಿ ಬಗ್ಗೆ ಕ್ಷಮೆ ಕೋರುವಂತಹ ಹೇಳಿಕೆಯನ್ನು ನೀಡಿಲ್ಲ. ಬಹುಕೋಟಿ ನೈಸ್ ಕಂಪನಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ಗೆ ತಪ್ಪು ಮಾಹಿತಿ ನೀಡಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದೇನೆ. ಅಂತಹ ಮಹಾಪರಾಧ ಮಾಡಿರುವ ಅವರನ್ನು ನೇಣಿಗೇರಿಸಬೇಕು ಎಂದು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು.
ಅಡ್ವೊಕೇಟ್ ಜನರಲ್ ಎಜೆ ಅವರ ಘನತೆಗೆ ಕುಂದುಂಟು ಮಾಡುವ ರೀತಿಯಲ್ಲಿ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು.ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ವಕೀಲರ ಪರಿಷತ್ ಶುಕ್ರವಾರ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು.
ರಾಜ್ಯ ವಕೀಲರ ಸಂಘದ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ತಾನು ಎಜೆ ಅವರ ಕ್ಷಮೆ ಕೋರುವಂತಹ ಹೇಳಿಕೆ ಕೊಟ್ಟಿಲ್ಲ. ಪ್ರಜಾಪ್ರಭುತ್ವದಲ್ಲಿ ಟೀಕಿಸಲು ಎಲ್ಲರಿಗೂ ಹಕ್ಕಿದೆ ಎಂದರು.