ಬೆಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆರೆಸಿಕ್ಕಿರುವ ಶಂಕಿತ ಇಬ್ಬರು ಲಷ್ಕರ್ ಎ ತೊಯ್ಬಾದ ಉಗ್ರರ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯದ ಅಗತ್ಯವಿದೆ ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಧಿತ ಉಗ್ರರಿಬ್ಬರ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಬೇಕೆಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉಚ್ಚನ್ಯಾಯಾಲಯದ ಅನುಮತಿ ಪಡೆದು ವಿಶೇಷ ನ್ಯಾಯಾಲಯ ಸ್ಥಾಪನೆಗೆ ಮುಂದಾಗಬೇಕೆಂದು ಕೋರಿರುವುದಾಗಿ ಹೇಳಿದರು.
ಬೆಂಗಳೂರು ಸ್ಫೋಟ ಪ್ರಕರಣ ಕುರಿತಂತೆ ವಿಶೇಷ ನ್ಯಾಯಾಲಯದ ರಚನೆಗಾಗಿ ರಾಜ್ಯ ಸರ್ಕಾರ ಸೂಕ್ತ ಕ್ರಮಗೊಳ್ಳಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಬಂಧಿತ ಉಗ್ರರಿಗೆ 14 ದಿನ ನ್ಯಾಯಾಂಗ ಬಂಧನ: ಬೆಂಗಳೂರು ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಶಂಕಿಸಿರು ಇಬ್ಬರು ಲಷ್ಕರ್ ಎ ತೊಯ್ಬಾದ ಉಗ್ರರನ್ನು ಇತ್ತೀಚೆಗಷ್ಟೇ ಬಾಂಗ್ಲಾದೇಶದಲ್ಲಿ ಬಂಧಿಸಲ್ಪಟ್ಟಿದ್ದರು. ಬಂಧಿತ ಉಗ್ರರನ್ನು ಬಾಂಗ್ಲಾ ಅಧಿಕಾರಿಗಳು ಭಾರತಕ್ಕೆ ಹಸ್ತಾಂತರಿಸಿದ್ದರು.
ಬಂಧಿತ ನಜೀರ್ ಮತ್ತು ಶಂಶುದ್ದೀನ್‌ನನ್ನು ಶನಿವಾರ ಬೆಂಗಳೂರು ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರನ್ನು 14ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.