ಅಂತರ್ಜಾಲದ ವಿಕಿಪಿಡಿಯಾ ಮಾದರಿಯಲ್ಲೇ ಕನ್ನಡದಲ್ಲಿ ಜಗತ್ತಿನ ಪೂರ್ಣ ವಿಚಾರಗಳ ಬಗ್ಗೆ ಮಾಹಿತಿ ಒದಗಿಸುವ ಕನ್ನಡ ವಿದ್ಯುನ್ಮಾನ ಜ್ಞಾನಕೋಶಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಅಧಿಕೃತವಾಗಿ ಚಾಲನೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕನ್ನಡದ ಜ್ಞಾನಕೋಶ ಕಣಜಗೆ ಚಾಲನೆ ನೀಡಿ ಮಾತನಾಡಿದ ಅವರು, ಇಡೀ ಜಗತ್ತಿನ ತಿಳುವಳಿಕೆಯನ್ನು ಕನ್ನಡಿಗರಿಗೂ ಒದಗಬೇಕು ಎಂಬ ನನ್ನ ಕನಸು ಈ ಪೋರ್ಟಲ್ ಮೂಲಕ ನನಸಾಗಿದೆ ಎಂದರು.
ರಾಷ್ಟ್ರದಲ್ಲೇ ಪ್ರಥಮವಾಗಿ ರಾಜ್ಯವೊಂದರ ಮಾತೃಭಾಷೆಯಲ್ಲಿ ಲಭ್ಯವಾಗುತ್ತಿರುವ ವಿದ್ಯುನ್ಮಾನ ಜ್ಞಾನಕೋಶ ಇದಾಗಿದೆ. 1ಕೋಟಿ 30ಲಕ್ಷ ಕನ್ನಡ ಲೇಖನಗಳನ್ನು ಸೇರಿಸಲು ಅವಕಾಶವಿರುವ ಈ ಜ್ಞಾನಕೋಶವು ವಿಶ್ವದ ಎಲ್ಲೆಡೆ ಇರುವ ಕನ್ನಡಿಗರು ಮಾತೃಭಾಷೆಯೊಂದಿಗೆ ನಿರಂತರ ಬಾಂಧವ್ಯ ಬೆಳೆಸಿಕೊಳ್ಳಲು ಪೂರಕವಾಗಲಿದೆ ಎಂದರು.
ಕನ್ನಡ ನುಡಿಯ ಹಿರಿಮೆ, ಸಂಸ್ಕೃತಿಯ ಗರಿಮೆಯನ್ನು ಸಂರಕ್ಷಿಸಲು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಅಗತ್ಯವಿರುವ ಎಲ್ಲಾ ನೆರವಿನ ಜೊತೆಗೆ ಕನ್ನಡದಲ್ಲಿ ಸರ್ವವಸ್ತು ಜ್ಞಾನಕೋಶವನ್ನು ಇಂಟರ್ನೆಟ್‌ನಲ್ಲಿ ಅಳವಡಿಸಲು 2ಕೋಟಿ ರೂಪಾಯಿ ಮೀಸಲಿಟ್ಟಿದ್ದಾಗಿ ಹೇಳಿದರು.