ಲಾರಿ ಮಾಲೀಕರ ಬೇಡಿಕೆಗಳನ್ನು ಶೀಘ್ರವೇ ಈಡೇರಿಸದಿದ್ದರೆ ಮುಂದಿನ ವಾರ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘಗಳ ಒಕ್ಕೂಟ ಮತ್ತೆ ಎಚ್ಚರಿಕೆ ನೀಡಿದೆ.
ಮರಳು ಹರಾಜಿನ ಸಂಬಂಧ ಈ ಹಿಂದೆ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಅವರು ಕೇವಲ ಆಶ್ವಾಸನೆ ಕೊಟ್ಟರೇ ವಿನಃ ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲ ಎಂದು ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂದಿನ ವಾರ ಲಾರಿ ಸಂಚಾರ ಸ್ಥಗಿತಗೊಳಿಸಿ ಹೋರಾಟದ ಹಾದಿ ಹಿಡಿಯುವುದಾಗಿ ಎಚ್ಚರಿಸಿದ್ದಾರೆ. ಮರಳಿನ ವಿಷಯವಾಗಿ ತಮಿಳುನಾಡಿನಲ್ಲಿರುವ ಮರಳುಗಾರಿಕೆ ಪದ್ಧತಿಯನ್ನು ಜಾರಿಗೆ ತರುವುದಾಗಿ ಹೇಳಿ ಸರ್ಕಾರ ಗೊಂದಲ ಮೂಡಿಸುತ್ತಿದೆ ಎಂದು ದೂರಿದರು.
ಮರಳು ಗಣಿಗಳ ಹರಾಜು ಪ್ರಸ್ತುತ ಕೇವಲ ಒಂದು ವರ್ಷಕ್ಕೆ ಸೀಮಿತ ಮಾಡಿದ್ದಾರಲ್ಲದೆ ಅದನ್ನು ಬದಲಿಸದೆ ಮೂಲೆಗುಂಪಾಗಿ ಮಾಡಿದ್ದಾರೆ . ಹಾಗಾಗಿ ಇದರ ಅವಧಿಯನ್ನು 1 ವರ್ಷದಿಂದ 3 ವರ್ಷಕ್ಕೆ ಸೀಮಿತಗೊಳಿಸಬೇಕೆಂದು ಅವರು ಒತ್ತಾಯಿಸಿದರು.