ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆರ್.ಎಸ್.ಎಸ್. ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ಒಪ್ಪಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದಿಂದ ತಲೆದೋರಿರುವ ಸ್ಥಿತಿ-ಗತಿ ಹಾಗೂ ಮುಂದೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಯಡಿಯೂರಪ್ಪ ಆರ್‌ಎಸ್‌ಎಸ್ ನಾಯಕರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದರು.
ರೆಡ್ಡಿಗಳನ್ನು ಸಚಿವ ಸಂಪುಟದಿಂದ ಕೈ ಬಿಡುವಂತೆ ಒತ್ತಡ, ಪ್ರತಿಪಕ್ಷಗಳ ಧರಣಿ, ಪ್ರತಿಭಟನೆ ವಿರುದ್ಧ ಮುಂಬರುವ ಅಧಿವೇಶನದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಕುರಿತಂತೆ ಚರ್ಚೆ ನಡೆಸಿದರೆಂದು ಆಪ್ತ ಮೂಲಗಳು ತಿಳಿಸಿವೆ.
ಕರ್ನಾಟಕ ಗಡಿಭಾಗದಲ್ಲಿ ಸಂಪುಟದ ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಪ್ರತಿಪಕ್ಷಗಳು ಭಾರೀ ಪ್ರತಿಭಟನೆ ನಡೆಸುತ್ತಿವೆ. ಅಲ್ಲದೆ, ಬಿಬಿಎಂಪಿ ಹಗರಣ, ರೆಸಾರ್ಟ್ ರಾಜಕಾರಣ ವಿರುದ್ಧ ವಾಗ್ದಾಳಿ ನಡೆಸಲು ಕಾಂಗ್ರೆಸ್, ಜೆಡಿಎಸ್ ಸಿದ್ದತೆ ನಡೆಸುತ್ತಿವೆ. ಆ ನಿಟ್ಟಿನಲ್ಲಿ ಪ್ರತಿಪಕ್ಷಗಳ ವಾಗ್ಭಾಣಕ್ಕೆ ತಕ್ಕ ತಿರುಗೇಟು ನೀಡುವ ಕುರಿತು ಆರ್‌ಎಸ್‌ಎಸ್ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆಂದು ಮೂಲಗಳು ಹೇಳಿವೆ.