ಕರ್ನಾಟದಲ್ಲಿ ಗಣಿಧಣಿಗಳಿಂದ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಸಂಸತ್ ಅಧಿವೇಶನದಲ್ಲಿ ಹಲವು ಸಂಸದರು ವಿಷಯ ಪ್ರಸ್ತಾಪಿಸಿ ತನಿಖೆಗೆ ಆಗ್ರಹಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರ ಬಳ್ಳಾರಿ ಜಿಲ್ಲೆಯ ಗಣಿಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಕಾರ್ಯಪಡೆಗೆ ಅವರು ನಿರ್ದೇಶನ ನೀಡಿದ್ದಾರೆ.
ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆಗೆ ಪ್ರಸ್ತಾಪ ಕಳುಹಿಸುವಂತೆ ಪರೋಕ್ಷವಾಗಿ ಸೂಚಿಸಿ ಕೇಂದ್ರ ಗಣಿ ಸಚಿವ ಬಿ.ಕೆ.ಹಂಡಿಕ್ ಅವರು ಇತ್ತೀಚೆಗೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೆ ಪತ್ರ ಬರೆದಿದ್ದರು. ಆದರೆ ರಾಜ್ಯದಲ್ಲಿ ಯಾವುದೇ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ, ಆ ನಿಟ್ಟಿನಲ್ಲಿ ಸಿಬಿಐ ತನಿಖೆಗೆ ನಕಾರ ವ್ಯಕ್ತಪಡಿಸಿ ಕರ್ನಾಟಕ ಸರ್ಕಾರ ಪತ್ರಕ್ಕೆ ಪ್ರತಿಕ್ರಿಯೆ ನೀಡಿತ್ತು. ಇದೀಗ ಕೇಂದ್ರ ಸರ್ಕಾರ ದಿಢೀರನೆ ರಾಜ್ಯಕ್ಕೆ ಕಾರ್ಯಪಡೆ ಕಳುಹಿಸುತ್ತಿರುವುದರಿಂದ ಬಿಜೆಪಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.
ಬಳ್ಳಾರಿಯಲ್ಲಿನ ಅಕ್ರಮ ಗಣಿ ತನಿಖೆಗಾಗಿ ಎರಡು ತಂಡಗಳು ಡಿಸೆಂಬರ್ 7ರಿಂದ 12ರವರೆಗೆ ಹೊಸಪೇಟೆ ಗಣಿವಲಯದಲ್ಲಿ ತನಿಖೆ ನಡೆಸಲಿದೆ. ಪ್ರತಿ ತಂಡದಲ್ಲಿ ಐಬಿಎಂನ ಇಬ್ಬರು ಮತ್ತು ರಾಜ್ಯ ಗಣಿ ಇಲಾಖೆಯ ಒಬ್ಬ ಅಧಿಕಾರಿ ಇರುತ್ತಾರೆ ಎಂದು ಭಾರತೀಯ ಗಣಿ ನಿರ್ದೇಶನಾಲಯದ ಪ್ರಾದೇಶಿಕ ಉಪನಿಯಂತ್ರಿಕ ಎಂ.ಎಸ್.ವಾಗ್ಮರೆ ತಿಳಿಸಿದ್ದಾರೆ.