'ಕುರುಬ ಜನಾಂಗದಲ್ಲಿ ಸಿದ್ದರಾಮಯ್ಯ ಹೇಗೆ ಹುಟ್ಟಿದರೋ ಗೊತ್ತಿಲ್ಲ, ಏನಾದ್ರೂ ನಿನಗೆ ನಿಯತ್ತಿದೆಯೇ ಸಿದ್ದರಾಮಯ್ಯ' ಹೀಗೆ ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ವಾಚಾಮಗೋಚರ ವಾಗ್ದಾಳಿ ನಡೆಸಿದವರು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ.
ಬಳ್ಳಾರಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರತಿಪಕ್ಷ ನಾಯಕರ ವಿರುದ್ಧ ಖಾರವಾಗಿ ಮಾತನಾಡಿದ ಅವರು, ಬಳ್ಳಾರಿ ಎಂದರೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ, ಡಿಕೆಶಿ, ದೇವೇಗೌಡ ಹಾಗೂ ಕುಮಾರಸ್ವಾಮಿಗೆ ಶಾಕ್ ಹೊಡೆದಂತೆ ಆಗುತ್ತೆ. ಇವರೆಲ್ಲಾ ನಾಚಿಕೆ, ಮಾನ-ಮರ್ಯಾದೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಏಳಿಗೆಯನ್ನು ಸಹಿಸದ ವಿಪಕ್ಷಗಳು ಅನಾವಶ್ಯಕವಾಗಿ ನಮ್ಮ ಮೇಲೆ ಅಕ್ರಮ ಗಣಿಗಾರಿಕೆ ಆರೋಪ ಹೊರಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಬಳ್ಳಾರಿ ಜನಗಳ ಆಶೀರ್ವಾದದಿಂದಲೇ ನಾವು ಅಧಿಕಾರದಲ್ಲಿದ್ದೇವೆ. ಪ್ರತಿಪಕ್ಷಗಳ ಟೀಕೆಗಳಿಗೆಲ್ಲ ಬೆಲೆ ನೀಡುವುದಿಲ್ಲ ಎಂದರು.
2006ರಲ್ಲಿಯೇ ನಾನು ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ನನ್ನ ಬಗ್ಗೆಯೂ ಸಿಬಿಐ ತನಿಖೆ ನಡೆಸಿ ಎಂದು ಆಗ್ರಹಿಸಿದ್ದೆ. ಆಗ ಸಮರ್ಪಕವಾಗಿ ತನಿಖೆ ನಡೆಸಿದ್ದರೆ ಯಾರೋ ಖದೀಮರು ಎಂಬುದು ಬಯಲಾಗುತ್ತಿತ್ತು ಎಂದು ಹೇಳಿದರು.
ಬಳ್ಳಾರಿ ಎಲ್ಲ ಮೂಲ ಸೌಲಭ್ಯದಿಂದ ವಂಚಿತವಾಗಿತ್ತು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ 30ವರ್ಷಗಳ ರಾಜಕೀಯ ಹೋರಾಟದ ಫಲವಾಗಿ ಸಿಎಂ ಗದ್ದುಗೆ ಏರುವ ಮೂಲಕ ಬಳ್ಳಾರಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಬಹುಪರಾಕ್ ಹಾಕಿದರು.