ರಾಜ್ಯದಲ್ಲಿ ಇದೇ ರೀತಿ ರಾಜಕೀಯ ಸ್ಥಿತಿ ಮುಂದುವರಿದರೆ ಹೇಗೆ ನಡೆದುಕೊಳ್ಳಬೇಕು ಎಂಬುದು ನನಗೆ ಚೆನ್ನಾಗಿ ತಿಳಿದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಪಕ್ಷಗಳ ಟೀಕೆ ವಿರುದ್ಧ ಗುಡುಗಿದ್ದಾರೆ.
ರಾಜಕೀಯ ಬಿಕ್ಕಟ್ಟಿನಿಂದ ನೊಂದು ಮೃದುವಾಗಿರುವುದನ್ನು ದೌರ್ಬಲ್ಯ ಎಂದು ತಿಳಿದುಕೊಂಡು ಕೆಲವರು ಅಭಿವೃದ್ಧಿ ಕಾರ್ಯಕ್ರಮಗಳ ವೇಗಕ್ಕೆ ಕಡಿವಾಣ ಹಾಕುತ್ತಿದ್ದಾರೆ. ಇದನ್ನು ಜನ ನೋಡುತ್ತಿದ್ದಾರೆ. ಜನ ಬೆಂಬಲ ಎಲ್ಲಿಯವರೆಗೆ ಇರುತ್ತೋ ಅಲ್ಲಿಯವರೆಗೆ ನಾನು ಚಿಂತಿಸುವುದಿಲ್ಲ ಎಂದು ಅವರು ನಗರದಲ್ಲಿ ಬಾಳೆ ಹೊನ್ನೂರು ಧರ್ಮಪೀಠ ನೂತನವಾಗಿ ನಿರ್ಮಿಸಿದ ಶ್ರೀ ಸೋಮೇಶ್ವರ ಸಭಾಭವನ ಉದ್ಘಾಟಿಸಿ ಅವರು ಮಾತನಾಡಿದರು.
ನನಗೆ ಅಧಿಕಾರ ಶಾಶ್ವಾತ ಅಲ್ಲ, ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದೇನೆ, ಎಲ್ಲರ ಆಶೀರ್ವಾದದಿಂದ ಕೆಲಸ ಮಾಡುತ್ತಿದ್ದೇನೆ. ನಾನು ರಾಜ್ಯದ ಮುಖ್ಯಮಂತ್ರಿ ಅಲ್ಲ, ಆರು ಕೋಟಿ ಕನ್ನಡಿಗರ ಸೇವಕ ಎಂದು ಹೇಳಿದರು.
ಪ್ರವಾಹ ಪೀಡಿತ ಜನರ ಬಗ್ಗೆ ರಾಜ್ಯದ ನಾಗರಿಕರು ಉದಾರತೆ ತೋರಿ, 1,700ಕೋಟಿ ರೂ.ಹಣ ಸಂಗ್ರಹಕ್ಕೆ ಕಾರಣರಾಗಿದ್ದಾರೆ. ಹಿಂದೆ ಯಾವ ಸರ್ಕಾರ ಮಾಡದ್ದನ್ನು ಬಿಜೆಪಿ ಸರ್ಕಾರ ಮಾಡಿದೆ. ಬಿದ್ದವರನ್ನು ಎತ್ತುವುದೇ ನಮ್ಮ ಧರ್ಮ ಸರ್ವರಿಗೂ ಸಮಪಾಲು, ಸಮಬಾಳು ಎನ್ನುವುದೇ ಸರ್ಕಾರದ ಮಂತ್ರ ಎಂದರು.