ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಟರ್ ಕಾರಿಡಾರ್(ಬಿಎಂಐಸಿ) ಯೋಜನೆ ಕುರಿತಂತೆ ರಾಜ್ಯ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಅವರು ಸುಪ್ರೀಂಕೋರ್ಟ್ ವಿಚಾರಣೆ ವೇಳೆ ತಪ್ಪು ಮಾಹಿತಿ ನೀಡಿ ನ್ಯಾಯಾಲಯದ ದಿಕ್ಕು ತಪ್ಪಿಸಿರುವುದಾಗಿ ಜನತಾ ನ್ಯಾಯಾಲಯ ಕೂಡ ಅಭಿಪ್ರಾಯಪಟ್ಟಿದೆ.
ಭೂಸ್ವಾಧೀನ ವಿರೋಧಿ ವೇದಿಕೆ ಏರ್ಪಡಿಸಿದ್ದ ಜನತಾ ನ್ಯಾಯಾಲಯದಲ್ಲಿ ಯೋಜನೆ ಕುರಿತು ವಿಚಾರಣೆ ನಡೆಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಎಚ್.ಸಿ.ನೀರಾವರಿ, ಅಬ್ದುಲ್ ಅಜೀಂ ಅವರಿದ್ದ ಪೀಠ, ಈ ಯೋಜನೆ ಒಂದು ಬಹುದೊಡ್ಡ ಹಗರಣ. ಇದರಲ್ಲಿ ಶಾಮೀಲಾಗಿರುವ ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ವಿಚಾರಣೆ ನಡೆಸಬೇಕು ಎಂದು ತೀರ್ಪು ನೀಡಿದೆ.
ಭಾನುವಾರ ನಡೆದ ಜನತಾ ನ್ಯಾಯಾಲಯದ ವಿಚಾರಣೆ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೈಸ್ ಭೂ ಕಬಳಿಕೆ ಮತ್ತು ನ್ಯಾಯಾಂಗದ ಉಲ್ಲಂಘನೆ ಬಗ್ಗೆ ಸುದೀರ್ಘವಾಗಿ ಮಾಹಿತಿ ನೀಡಿದ್ದರು. ಈ ಸಂದರ್ಭದಲ್ಲಿ ಅನ್ಯಾಯಕ್ಕೊಳಗಾದ ರೈತರು ಕೂಡ ವಿವರಣೆ ನೀಡಿದರು.
ಸರ್ಕಾರ ಮತ್ತು ನೈಸ್ ಕಂಪನಿ ನಡುವಿನ 1997ರ ಮೂಲ ಒಪ್ಪಂದದ ಪ್ರಕಾರ ರಸ್ತೆ ಮತ್ತು ಉಪನಗರ ಯೋಜನೆಗೆ ಕೇವಲ 20,193ಎಕರೆ ಭೂಮಿ ನೀಡಬೇಕು. ಆದರೆ ಈಗ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ನೈಸ್ ಜೊತೆ ಎರಡು ಉಪ ಒಪ್ಪಂದ ಮಾಡಿಕೊಂಡಿರುವ ಸರ್ಕಾರ 1,75,250ಎಕರೆ ಭೂಮಿ ನೀಡಲು ಮುಂದಾಗಿದೆ ಎಂದು ರಾಜಾಜಿನಗರದ ರಘುನಾಥ್ ದೂರಿದರು.