ಮುಖ್ಯಮಂತ್ರಿಗಳು ಅಕ್ರಮ ಗಣಿಗಾರಿಕೆಯ ವಿಚಾರವಾಗಿ ಅಧಿವೇಶನದಲ್ಲಿ ಚರ್ಚಿಸುತ್ತೇನೆ ಎಂದಿರುವುದು ಮೂರ್ಖತನ ಎಂದು ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ವ್ಯಂಗ್ಯವಾಡಿದ್ದಾರೆ.
ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಕೇಂದ್ರ ಸರ್ಕಾರ ಅದಾಗಲೇ 14 ಪತ್ರಗಳನ್ನು ಬರೆದಿದೆ. ಆದರೆ, ಲೋಕಾಯುಕ್ತರ ಮೂಲಕ ತನಿಖೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ನುಣುಚಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಒಮ್ಮೆ ಗಣಿಗಾರಿಕೆ ಸಿಬಿಐಗೆ ಒಪ್ಪಿಸಲು ಸಹಕಾರ ನೀಡುವುದಾಗಿ ಹೇಳಿದರೆ ಮತ್ತೊಮ್ಮೆ ಸಿಬಿಐಗೆ ಒಪ್ಪಿಸುವುದಿಲ್ಲ ಅಧಿವೇಶನದಲ್ಲಿ ಚರ್ಚೆ ನಡೆಸುತ್ತೇನೆ ಎನ್ನುತ್ತಾರೆ. ಮುಖ್ಯಮಂತ್ರಿಗಳಿಗೆ ಆರೋಗ್ಯ ಸಮಸ್ಯೆ ಇದ್ದ ಹಾಗಿದೆ ಎಂದು ಅವರು ಲೇವಡಿ ಮಾಡಿದರು. ರೆಡ್ಡಿ ಸಹೋದರರಿಗೆ ಹೆದರಿ ಮುಖ್ಯಮಂತ್ರಿಗಳು ಗಣಿ ಅಕ್ರಮವನ್ನು ಸಿಬಿಐಗೆ ಒಪ್ಪಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೇಶಪಾಂಡೆ ಟೀಕಿಸಿದರು.