ರೆಡ್ಡಿ ಸಹೋದರರನ್ನು ಯಾವುದೇ ಕಾರಣಕ್ಕೂ ಸಚಿವ ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಖಾಸಗಿ ಟಿವಿ ಚಾನೆಲ್ ಟಿವಿ9 ಜೊತೆ ಮಾತನಾಡಿದ ಅವರು, ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಸುವ ಕುರಿತು ಪ್ರತಿಕ್ರಿಯೆ ನೀಡಿ, ಪ್ರತಿಪಕ್ಷಗಳ ಸಿಬಿಐ ತನಿಖೆ ನಿರ್ಧಾರವನ್ನು ಪಕ್ಷ ಸ್ವಾಗತಿಸುವುದಾಗಿ ಹೇಳಿದರು.
ಆದರೆ ರೆಡ್ಡಿ ಸಹೋದರರನ್ನು ಸಂಪುಟದಿಂದ ಕೈಬಿಡಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ರೆಡ್ಡಿ ಸಹೋದರರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.
ತಪ್ಪು ಮುಚ್ಚಿಕೊಳ್ಳುವ ಸಲುವಾಗಿ ಪ್ರತಿಪಕ್ಷಗಳು ಯತ್ನಿಸುತ್ತಿರುವುದಾಗಿ ಆರೋಪಿಸಿದ ಅವರು, ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ರಾಜ್ಯ ವಿಧಾನಪರಿಷತ್ ಚುನಾವಣೆಯಲ್ಲಿ 12ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಾಗಿ ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು.