ವಾರ್ಡ್ ಮೀಸಲಾತಿ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದ ನಡುವೆಯೇ, ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಕೊನೆಗೂ ಸೋಮವಾರ ರಾಜ್ಯ ಚುನಾವಣಾ ಆಯೋಗ ದಿನಾಂಕವನ್ನು ಘೋಷಿಸಿದೆ.
ನಗರದ 198 ವಾರ್ಡ್‌ಗಳಿಗೆ ಫೆಬ್ರುವರಿ 21ರಂದು ಬಿಬಿಎಂಪಿ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಅಧಿಕೃತವಾಗಿ ತಿಳಿಸಿದೆ. ಆ ನಿಟ್ಟಿನಲ್ಲಿ ಫೆ.1ರಿಂದ ನಾಮಪತ್ರ ಸಲ್ಲಿಕೆ ಆರಂಭ. ಫೆ.8ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ. ಫೆ.9ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಫೆ.11 ನಾಮಪತ್ರ ವಾಪಸಾತಿಗೆ ಕಡೆಯ ದಿನವಾಗಿದೆ ಎಂದು ಚುನಾವಣಾಧಿಕಾರಿ ಚಿಕ್ಕಮಠ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದರು.
ಫೆಬ್ರುವರಿ 24ರಂದು ಮತಎಣಿಕೆ ನಡೆಯಲಿದೆ ಎಂದಿರುವ ಅವರು, ಬಿಬಿಎಂಪಿ ಚುನಾವಣೆ ನಡೆಯುವ ನಿಟ್ಟಿನಲ್ಲಿ ಜನವರಿ 15ರಿಂದ ಫೆ.25ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.
ಬಿಬಿಎಂಪಿಯ 198ವಾರ್ಡ್‌ಗಳಲ್ಲಿ ಒಟ್ಟು 66,17,379 ಮತದಾರರಿದ್ದಾರೆ. ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ ಬಳಸಿಕೊಳ್ಳಲಾಗುತ್ತದೆ. ಸೂಕ್ಷ್ಮಮತಗಟ್ಟೆಗಳಲ್ಲಿ ವೀಡಿಯೊ ಚಿತ್ರೀಕರಣ ಕೂಡ ಮಾಡಲಾಗುವುದು. ಅಲ್ಲದೆ, ಅಂಧರ ಮತದಾನಕ್ಕೆ ಬ್ರೈಲ್ ಲಿಪಿ ಅಳವಡಿಕೆ ಮಾಡಲಾಗುತ್ತದೆ ಎಂದು ಚಿಕ್ಕಮಠ್ ವಿವರಿಸಿದರು.