ಅಕ್ರಮ ಗಣಿ-ಸಿಎಂ ಪ್ರಕರಣದ ದಾರಿ ತಪ್ಪಿಸ್ತಿದ್ದಾರೆ:ಸಿದ್ದು
ಕೊಳ್ಳೇಗಾಲ, ಸೋಮವಾರ, 7 ಡಿಸೆಂಬರ್ 2009( 18:31 IST )
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ಮಾಹಿತಿ ಇದ್ದರೂ , ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕರಣವನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಕಿಡಿಕಾರಿದ್ದರೆ.
ನಗರದ ಅಂಬೇಡ್ಕರ್ ಪುಣ್ಯಸ್ಮರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಆಗಮಿಸಿದ ಅವರು, ಕಾರ್ಯಕ್ರಮಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ 6 ಕೋಟಿ ಜನರ ಸಂಪತ್ತಾದ ಗಣಿ ಅದಿರನ್ನು ರೆಡ್ಡಿ ಸಹೋದರರು ಕೊಳ್ಳೆಹೊಡೆಯುತ್ತಿದ್ದರೂ ಮುಖ್ಯಮಂತ್ರಿಗಳು ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳುತ್ತಿರುವುದು ಅವರೂ ಕೂಡ ಅಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂಬುದನ್ನು ಸಾಬೀತು ಪಡಿಸುತ್ತದೆ ಎಂದು ಆರೋಪಿಸಿದರು.
ಎಲ್ಲಾ ರೀತಿಯ ಸಾಕ್ಷ್ಯಾಧಾರಗಳು ಇದ್ದರೂ ಯಡಿಯೂರಪ್ಪ ಮಾತ್ರ ಅಕ್ರಮ ಗಣಿಗಾರಿಕೆಯ ತನಿಖೆ ಮಾಡಲು ಮೀನಾ ಮೇಷ ಎಣಿಸುತ್ತಿರುವುದು ಜನತೆಗೆ ಮಾಡುತ್ತಿರುವ ದ್ರೋಹ ಎಂದು ಟೀಕಿಸಿದರು.