ರೆಡ್ಡಿಗಳಿಂದ ನನ್ನ ಏನೂ ಮಾಡಲು ಸಾಧ್ಯವಿಲ್ಲ: ಸಿದ್ದರಾಮಯ್ಯ
ಬೆಂಗಳೂರು, ಮಂಗಳವಾರ, 8 ಡಿಸೆಂಬರ್ 2009( 09:40 IST )
NRB
ಸಿದ್ದರಾಮಯ್ಯ ಕುರುಬ ಜನಾಂಗದಲ್ಲಿ ಹೇಗೆ ಹುಟ್ಟಿದ್ದರೋ...ಸಿದ್ದರಾಮಯ್ಯ ನಿನಗೇನಾದ್ರೂ ನಿಯತ್ತಿದೆಯೇ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಸಚಿವ ಜನಾರ್ದನ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಉತ್ತರ ಕುಮಾರನ ಪೌರುಷ ಒಲೆ ಮುಂದೆ ಎಂದು ಲೇವಡಿ ಮಾಡಿದ್ದಾರೆ.
ನನ್ನ ಮೂರು ದಶಕಗಳ ರಾಜಕೀಯ ಜೀವನದಲ್ಲಿ ಇಂತಹ ಮಂದಿಯನ್ನು ಸಾಕಷ್ಟು ನೋಡಿದ್ದೇನೆ. ಹಣದ ಮದ, ಅಹಂಕಾರ ಇವೆಕ್ಕೆಲ್ಲ ಬೆಲೆ ನೀಡುವುದಿಲ್ಲ ಎಂದು ಕಿಡಿಕಾರಿರುವ ಅವರು, ಇಂಥ ನೂರು ಮಂದಿ ರೆಡ್ಡಿಗಳು ಬಂದ್ರೂ ನನ್ನ ಏನೂ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ನಂಜನಗೂಡಿನಲ್ಲಿ ಸೋಮವಾರ ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯದ ಗಂಧ-ಗಾಳಿ ತಿಳಿಯದ, ಮೃಗಾಲಯದಲ್ಲಿ ಇರಬೇಕಾದ ರೆಡ್ಡಿ ಸಹೋದರರು ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವುದು ದೊಡ್ಡ ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಊರು ತುಂಬಾ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಇಂತಹ ನೀಚರ ವಿರುದ್ಧ ನನ್ನ ಭಾಷೆಯಲ್ಲೇ ವಿಧಾನಸಭೆ ಅಧಿವೇಶನದಲ್ಲೇ ತಕ್ಕ ಉತ್ತರ ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದರು.