ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ, ಯಶವಂತಪುರ-ಸೊಲ್ಲಾಪುರ ಎಕ್ಸ್‌ಪ್ರೆಸ್ ಹಾಗೂ ಯಶವಂತಪುರ-ಮೈಸೂರು ಎಕ್ಸ್‌ಪ್ರೆಸ್ ನೂತನ ರೈಲು ಸಂಚಾರಕ್ಕೆ ಮಂಗಳವಾರ ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡುವ ಮೂಲಕ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ರೈಲು ಸಂಚಾರ ಆರಂಭಿಸಬೇಕೆಂದು ಶಿವಮೊಗ್ಗ ಜನತೆ ಬಹಳಷ್ಟು ಕಾಲದಿಂದ ಬೇಡಿಕೆ ಇಟ್ಟಿದ್ದರೂ ಕೂಡ ಪ್ರಯೋಜನವಾಗಿರಲಿಲ್ಲವಾಗಿತ್ತು. ಆ ನಿಟ್ಟಿನಲ್ಲಿ ಕೊನೆಗೂ ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ರೈಲು ಸಂಚಾರ ಆರಂಭಗೊಂಡಂತಾಗಿದೆ.
ನೂತನ ರೈಲು ಮಾರ್ಗಗಳಿಗೆ ಸಚಿವೆ ಮಮತಾ ಬ್ಯಾನರ್ಜಿ ಚಾಲನೆ ನೀಡಿದರು. ನಂತರ ನಗರದ ರೈಲು ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಬ್ಯಾನರ್ಜಿ, ಬೆಂಗಳೂರು ಒಂದು ಸುಂದರ ನಗರವಾಗಿದೆ. ಅಲ್ಲದೆ, ಹವಾನಿಯಂತ್ರಿತ ನಗರವೆಂಬ ಖ್ಯಾತಿಯೂ ಸಿಲಿಕಾನ್ ಸಿಟಿಗೆ ಇದೆ ಎಂದು ಹೊಗಳಿದರು. ವಿವಿಧ ಸೌಕರ್ಯಕ್ಕೆ ಚಾಲನೆ ನೀಡಲು ತುಂಬಾ ಹರ್ಷವಾಗುತ್ತಿದೆ ಎಂದು ಬ್ಯಾನರ್ಜಿ ತಿಳಿಸಿದರು.
ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಶಿವಮೊಗ್ಗ ಜನರ ಬಹುದಿನಗಳ ಬೇಡಿಕೆ ಈಡೇರಿಸಿದ ಸಚಿವೆ ಮಮತಾ ಬ್ಯಾನರ್ಜಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡುತ್ತ ಹೇಳಿದರು.
ಸಮಾರಂಭದಲ್ಲಿ ಇಂಧನ ಸಚಿವ ಈಶ್ವರಪ್ಪ, ಶಾಸಕ ದಿನೇಶ್ ಗುಂಡು ರಾವ್, ಸಂಸದ ರಾಘುವೇಂದ್ರ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.