ಮರಳು ಸಾಗಾಣಿಕೆ ಲಾರಿ ಮಾಲೀಕರು ನಡೆಸುತ್ತಿರುವ ಮುಷ್ಕರ ಕಾನೂನು ಬಾಹಿರವಾಗಿದ್ದು, ಇಂತಹ ಬ್ಲಾಕ್‌ಮೇಲ್ ತಂತ್ರಕ್ಕೆ ಸರ್ಕಾರ ಮಣಿಯುವುದಿಲ್ಲ. ಲಾರಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಮರಳು ಸಾಗಾಣಿಕೆ ಲಾರಿ ಮಾಲೀಕರು ಪದೇ ಪದೇ ಮುಷ್ಕರದ ಹಾದಿ ಹಿಡಿಯುವುದು ಸರಿಯಲ್ಲ. ಇದು ಒಂದು ರೀತಿ ಬ್ಲಾಕ್‌ಮೇಲ್ ತಂತ್ರ, ಇದನ್ನು ಸಹಿಸಲಾಗದು. ಇದಕ್ಕೆ ಕಡಿವಾಣ ಹಾಕಲು ಸಿಎಂ ಜತೆ ಮಾತುಕತೆ ನಡೆಸುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಲಾರಿ ಮಾಲೀಕರ ಬೇಡಿಕೆಗಳ ಈಡೇರಿಕೆ ಕುರಿತಂತೆ ಈಗಾಗಲೇ ಲಾರಿ ಮಾಲೀಕರ ಸಂಘದ ಜತೆ ಐದಾರು ಬಾರಿ ಮಾತುಕತೆ ನಡೆಸಲಾಗಿದೆ. ಸರ್ಕಾರದಿಂದ ಏನೆಲ್ಲಾ ಸಹಕಾರ ನೀಡಬೇಕೊ ಅಷ್ಟನ್ನೆಲ್ಲಾ ಮಾಡಿದ್ದೇವೆ. ಆದರೂ ಮುಷ್ಕರ ನಡೆಸುತ್ತಿರುವುದು ಕಾನೂನು ಬಾಹಿರ ಎಂದರು.
ಅಧಿಕಾರಿಗಳ ಕಿರುಕುಳ ತಡೆಯಬೇಕೆಂಬುದು ಲಾರಿ ಮಾಲೀಕರ ಪ್ರಮುಖ ಬೇಡಿಕೆಯಾಗಿದೆ. ಆದರೆ ಲಾರಿ ಮಾಲೀಕರು ನಿಯಮಾನುಸಾರ ಮರಳು ಸಾಗಿಸದೆ ಅಧಿಕ ಪ್ರಮಾಣದಲ್ಲಿ ಮರಳು ತುಂಬಿಕೊಂಡು ಸಾಗಿಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅಂಥವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.