ಬೆಂಗಳೂರು ಸ್ಫೋಟದ ಬಂಧಿತ ಶಂಕಿತ ಆರೋಪಿಯಾಗಿರುವ ನಜೀರ್ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಮಾದಾಪುರ್‌ನ ಹೊಸ್ತೋಟದಲ್ಲಿ ಶುಂಠಿ ಕೃಷಿಯನ್ನು ಮಾಡುವ ಸೋಗಿನಲ್ಲಿ ಕಾಲಕಳೆಯುತ್ತಿದ್ದ ಎಂಬ ಅಂಶವನ್ನು ಅಲ್ಲಿನ ಸ್ಥಳೀಯರು ಬಹಿರಂಗಗೊಳಿಸಿದ್ದಾರೆ.
ಕಳೆದ ವರ್ಷ ನಡೆದ ಬೆಂಗಳೂರು ಸ್ಫೋಟದ ಮಾಸ್ಟರ್ ಮೈಂಡ್ ಎನ್ನಲಾಗಿರುವ ಶಂಕಿತ ಉಗ್ರ ನಜೀರ್ ಪೊಲೀಸರ ವಿಚಾರಣೆ ವೇಳೆಯಲ್ಲೂ ಈ ಅಂಶವನ್ನು ಒಪ್ಪಿಕೊಂಡಿದ್ದಾನೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹೊಸ್ತೋಟ ಜಮಾತ್ ಅಧ್ಯಕ್ಷ ಕೆ.ಎಂ.ಸೈದಾಲಿ, ನಜೀರ್ ಇಲ್ಲಿ ಶುಂಠಿ ಬೆಳೆಯನ್ನು ಬೆಳೆಯುತ್ತಿದ್ದ ಎಂದು ವಿವರಿಸಿದರು.
ಅಲ್ಲದೆ, ನಜೀರ್ ಹೊಸ್ತೋಟ ಮಸೀದಿಗೂ ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದನಂತೆ.ಆದರೆ ಈತ ತನ್ನ ಪಾಡಿಗೆ ತಾನಿರುತ್ತಿದ್ದ. ಆ ನಿಟ್ಟಿನಲ್ಲಿ ಆತನನ್ನು ಯಾರೂ ಶಂಕಿಸುವ ಗೊಡವೆಗೆ ಹೋಗಿರಲಿಲ್ಲವಾಗಿತ್ತು ಎಂದರು. ನಜೀರ್ ಅಂಗಡಿಗಳಿಗೆ ಬಂದು ಸಾಮಾನುಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದ. ಆದರೆ ತಾವು ಆತನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಆರೋಪವನ್ನು ಅಲ್ಲಗಳೆದರು. ಅಲ್ಲದೆ, ನಜೀರ್‌ನ ಚಟುವಟಿಕೆಗಳಿಗೆ ಹೊಸ್ತೋಟದ ಕೆಲವು ನಿವಾಸಿಗಳು ಸಹಾಯ ನೀಡುತ್ತಿದ್ದಾರೆ ಎಂಬ ಗಾಳಿ ಸುದ್ದಿಯನ್ನು ಕೂಡ ಅಲ್ಲಗಳೆದರು.
ಆತ ಮುಸ್ಲಿಮ್ ಎಂಬ ಕಾರಣಕ್ಕಾಗಿಯೇ, ಇಡೀ ಮುಸ್ಲಿಂ ಸಮುದಾಯದವರ ಮೇಲೆ ಶಂಕೆ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಸೈದಾಲಿ ವಿಷಾದ ವ್ಯಕ್ತಪಡಿಸಿದರು.
2006ರಲ್ಲಿ ಹೊಸತೋಟಕ್ಕೆ ಸೋಮವಾರಪೇಟೆ ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಜೀಜ್ ಅವರ ತೋಟದಲ್ಲಿ ಶುಂಠಿ ಕೃಷಿ ಗುತ್ತಿಗೆದಾರನಾಗಿ ಕೇರಳದಿಂದ ಆಗಮಿಸಿದ್ದು. ಕೆರೆ ಬದಿಯಲ್ಲಿ ಸುಸಜ್ಜಿತ ಟೆಂಟ್‌ನಲ್ಲಿ ವಾಸ. 2ವರ್ಷಗಳಲ್ಲಿ ಕೆಲವೊಮ್ಮೆ ಮಾತ್ರ ನಜೀರ್‌ನ ಪತ್ನಿ,ಮಕ್ಕಳು ಹೊಸ್ತೋಟಕ್ಕೆ ಬಂದಿದ್ದರು. ಈ ರೀತಿ ಸ್ನೇಹಿತರು, ಬಂಧುಗಳು ಬಂದಾಗ ತಂಗಲು ಬೇಕೆಂದು ಹೊಸ್ತೋಟದಲ್ಲಿ ನಜೀರ್ ಮತ್ತೊಂದು ಬಾಡಿಗೆ ಮನೆಯನ್ನೂ ಪಡೆದಿದ್ದ.
ಕಳೆದ ವರ್ಷ ಅಕ್ಟೋಬರ್‌ವರೆಗೂ ಹೊಸ್ತೋಟದಲ್ಲಿಯೇ ಇದ್ದ ನಜೀರ್, ಹೊಸ್ತೋಟದಲ್ಲಿ ಭಗವಾಧ್ವಜ ಹಾರಾಟದ ವಿಷಯದಲ್ಲಿ ಸಂಘಪರಿವಾರ ಮತ್ತು ಸ್ಥಳೀಯ ಸಂಘಟನೆಗಳಿಗೆ ವಿವಾದ ತಲೆದೋರಿ ವಿಕೋಪಕ್ಕೆ ತೆರಳಿದ ಸಂದರ್ಭ ಪೊಲೀಸರು ಹೊಸ್ತೋಟದಲ್ಲಿ ಬಂದು ಠಿಕಾಣಿ ಹೂಡಿದ್ದನ್ನು ಗಮನಿಸಿ, ಹೊಸ್ತೋಟದಿಂದ ಓಟಕಿತ್ತಿದ್ದ.
ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣ ನಡೆದ ನಂತರವೂ ನಜೀರ್ ಹೊಸ್ತೋಟದಲ್ಲಿಯೇ ಇದ್ದಿರಬಹುದಾದ ಶಂಕೆಯಿದ್ದು, ಇಲ್ಲಿಂದಲೇ ಮತ್ತಷ್ಟು ವಿಧ್ವಂಸಕ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಸೋಮವಾರ ಪೇಟೆ ಪೊಲೀಸರು ಸೋಮವಾರ ಕೂಡ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿಯನ್ನು ತನಿಖೆಗೆ ಒಳಪಡಿಸಿದ್ದಾರೆ. ನಜೀರ್ ಜೊತೆ ನಿಕಟ ಸಂಪರ್ಕ ಹೊಂದಿರುವ ಶಂಕೆ ಮೇಲೆ ನನ್ನ ಸೇರಿದಂತೆ ಮೂರು ಮಂದಿ ಮುಸ್ಲಿಂರನ್ನು ವಿಚಾರಣೆಗೊಳಪಡಿಸಿರುವುದಾಗಿ ಸೈದಾಲಿ ಹೇಳಿದರು.