ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಹಾಗೂ ಸಹೋದರರ ಮಾಲೀಕತ್ವದ ಆಂಧ್ರಪ್ರದೇಶದ ಓಬಳಾಪುರಂ ಮೈನಿಂಗ್ ಕಂಪೆನಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದನ್ನು ದೃಢೀಕರಿಸಿರುವ ಸಿಬಿಐ ತಂಡ ವಿಶೇಷ ನ್ಯಾಯಾಲಯದಲ್ಲಿ ಎಫ್ಐಆರ್ ದಾಖಲಿಸಲು ನಿರ್ಧರಿಸಿರುವುದಾಗಿ ಮೂಲವೊಂದು ತಿಳಿಸಿದೆ.
ರೆಡ್ಡಿ ಸಹೋದರರ ಓಎಂಸಿ ಗಣಿ ಸೇರಿದಂತೆ ಇವರ ಒಡೆತನದ ಬೇನಾಮಿ ಹೆಸರಿನಲ್ಲಿರುವ ಗಣಿ ಕಂಪನಿಗಳು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದು, ಈ ಸಂಬಂಧ ಸಿಬಿಐ ತಂಡ ತನಿಖೆಯನ್ನು ತೀವ್ರಗೊಳಿಸಿತ್ತು. ಗುರುವಾರ ಬೆಳಿಗ್ಗೆ ಗಣಿ ಧಣಿ ಜನಾರ್ದನ ರೆಡ್ಡಿ ಮತ್ತು ಎಸ್.ಕೆ.ಮೋದಿ ಕಚೇರಿ, ನಿವಾಸಗಳ ಮೇಲೆ ಸಿಬಿಐ ತಂಡ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಿತ್ತು.
ಅಲ್ಲದೆ, ಬಳ್ಳಾರಿ ಬಿಟ್ಟು ಹೋಗಬಾರದೆಂದು ಸಿಬಿಐ ರೆಡ್ಡಿ ಸಹೋದರರಿಗೆ ನೋಟಿಸ್ ಜಾರಿ ಮಾಡಿತ್ತು. ಅದೇ ಬೆನ್ನಲ್ಲೇ ಇದೀಗ ಅವರ ವಿರುದ್ಧ ಒಂದೆರಡು ದಿನಗಳಲ್ಲಿ ಎಫ್ಐಆರ್ ದಾಖಲಿಸಲು ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ರೆಡ್ಡಿಗಳ ವಿರುದ್ಧ ಸಿಬಿಐ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.