ಆಶ್ರಯ ಮತ್ತು ರಾಜೀವ್ ಗಾಂಧಿ ವಸತಿ ಯೋಜನೆಯಡಿ ಸರ್ಕಾರದಿಂದ ಮಂಜೂರಾದ ಮನೆಗಳಲ್ಲಿ ನಿಜ ವಾರಿಸುದಾರರುವಾಸವಿಲ್ಲದೆ ಸರ್ಕಾರಿ ಮನೆಗಳನ್ನು ಬಾಡಿಗೆಗೆ ನೀಡಿ ಜಾಗ ಖಾಲಿ ಮಾಡಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ವಸತಿ ಇಲಾಖೆ ಅಧಿಕಾರಿಗಳು ಮಂಗಳವಾರ ಯಲಹಂಕಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಲವು ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಸರ್ಕಾರ ಈ ಹಿಂದೆ ಬಡವರಿಗಾಗಿ ಮಂಜೂರು ಮಾಡಿದ್ದ ಮನೆಗಳಲ್ಲಿ ಮಾಲೀಕರು ವಾಸವಿಲ್ಲದೆ ಅದರಲ್ಲಿ ಬಾಡಿಗೆದಾರರು ಹಾಗೂ ಅವರ ಸಂಬಂಧಿಕರು ವಾಸವಾಗಿರುವ ಅಂಶ ಬಯಲಾಗಿದೆ.
ಈ ಗ್ರಾಮದಲ್ಲಿ ಸರ್ಕಾರಿ ಯೋಜನೆಯಡಿಯಲ್ಲಿ ನಿರ್ಮಿಸಿರುವ ಒಟ್ಟು 135 ಮನೆಗಳಲ್ಲಿ ಮುಕ್ಕಾಲು ಭಾಗ ಬಾಡಿಗೆದಾರರು ವಾಸ್ತವ್ಯ ಹೂಡಿದ್ದರೆ, ಉಳಿದ ಮನೆಗಳಲ್ಲಿ ಮಾಲೀಕರ ಬಂಧುಗಳು ಠಿಕಾಣಿ ಹೂಡಿದ್ದಾರೆ.
ಮನೆ ಇದ್ದವರಿಗೆ ಮನೆ ಕೊಟ್ಟು , ಗುಡಿಸಲಿಗೂ ಗತಿ ಇಲ್ಲದ ಮಂದಿಗೆ ಮೋಸ ಮಾಡಿದಂತಾಗಿದೆ. ಬಾಡಿಗೆಗೆ ನೀಡಿದ ಮನೆಗಳನ್ನು ವಾಪಸ್ ಪಡೆದು ಬಡವರಿಗೆ ಹಂಚಲು ಅಧಿಕಾರಿಗಳು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪಾಲಿಕೆ ಕಂದಾಯ ಅಧಿಕಾರಿಗಳಿಗೆ ಪರಿಶೀಲನೆ ನಡೆಸಿ ವರದಿ ನೀಡಲು ಆದೇಶಿಸಲಾಗಿದೆ.