ಸಂವಿಧಾನ 8ನೇ ಪರಿಚ್ಛೇದದಲ್ಲಿ ತುಳು ಸೇರ್ಪಡೆಗೆ ಶಿಫಾರಸು...
ಉಜಿರೆ, ಶುಕ್ರವಾರ, 11 ಡಿಸೆಂಬರ್ 2009( 11:21 IST )
NRB
ಸಂವಿಧಾನದ 8ನೇ ಪರಿಚ್ಛೇದದಲ್ಲಿ ತುಳು ಸೇರ್ಪಡೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಅವರು ಗುರುವಾರ ಸಂಜೆ ಇಲ್ಲಿನ ರತ್ನವರ್ಮ ಕ್ರೀಡಾಂಗಣದ ತುಳುನಾಡ ಸಿರಿ ದೊಂಪದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ರೂಪಿಸಿದ ವೇದಿಕೆಯಲ್ಲಿ ವಿಶ್ವತುಳು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ತುಳು ನಾಡ ಸಂಸ್ಕೃತಿ,ಜನರ ನಡೆ-ನುಡಿ ವಿಭಿನ್ನವಾದದ್ದು ಎಂದು ಬಣ್ಣಿಸಿದ ಮುಖ್ಯಮಂತ್ರಿಗಳು ತುಳುನಾಡ ಅಭಿವೃದ್ಧಿಗಾಗಿ ತಾವು ಸಾಕಷ್ಟು ನೆರವು ನೀಡುವುದಾಗಿಯೂ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಸಮ್ಮೇಳನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಪೇಜಾವರಶ್ರೀ, ಮೋಹನ್ ಆಳ್ವ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
ಸ್ವಾತಂತ್ರ್ಯಪೂರ್ವದಲ್ಲಿ ತುಳುನಾಡ ಸಿರಿ ಹೇಗಿತ್ತು ಎಂಬುದನ್ನು ಬಿಂಬಿಸುವ ನಿಟ್ಟಿನಲ್ಲಿ ರೂಪುತಳೆದ ಮಾದರಿ ತುಳುಗ್ರಾಮ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಗುರುವಾರ ವಿಧ್ಯುಕ್ತವಾಗಿ ಆರಂಭಗೊಂಡಿರುವ ವಿಶ್ವ ತುಳು ಸಮ್ಮೇಳನ ನಾಲ್ಕು ದಿನಗಳ ಕಾಲ ನಡೆಯಲಿದೆ. ಈ ಸಮಾರಂಭದಲ್ಲಿ ದೇಶ-ವಿದೇಶಗಳಿಂದ ಸುಮಾರು 2ಲಕ್ಷ ಅಧಿಕ ಮಂದಿ ತುಳುವರು ಭಾಗವಹಿಸುವ ನಿರೀಕ್ಷೆ ಇದೆ.
ಇಲ್ಲಿ ಕೃತಕವಾಗಿ ಮೈದಳೆದಿರುವ 'ತುಳು ಗ್ರಾಮ'ದಲ್ಲಿ ದೈವಸ್ಥಾನ, ಶ್ಯಾನುಭೋಗ್ ಮನೆ, ಕೃಷಿ ಭೂಮಿ, ಕೃಷಿ ಸಾಮಾಗ್ರಿ, ಕೆರೆ, ದನದ ಕೊಟ್ಟಿಗೆ, ಕೃತಕ ಕಾಲುಸಂಕ ದೇಶ-ವಿದೇಶಗಳಿಂದ ಆಗಮಿಸುವ ತುಳುವರನ್ನು ಆಕರ್ಷಿಸಲಿದೆ.
ತುಳು ಗ್ರಾಮ ಸಮ್ಮೇಳನದಲ್ಲಿ ತುಳು ಸಂಸ್ಕೃತಿ ಪರಿಚಯದೊಂದಿಗೆ, ಸುಮಾರು 70ಬಗೆಯ ಭಕ್ಷ್ಯಗಳು ಸೇರಿವೆ. ಅದರಲ್ಲಿ ಕಟಮಡಿಗೆ, ರವೆ ಲಡ್ಡು, ಕಾಯಿ ಹೋಳಿಗೆ, ಸುಕ್ಕುಂಡೆ, ಗೋಲಿಕೆಟ್ಟೆ ಪಾನಕ, ಎಳ್ಳು ಪಾನಕ, ಬಾಳೆ ಎಲೆಯ ಗಟ್ಟಿ, ಶ್ಯಾವಿಗೆ ಸೇರಿದಂತೆ ಹಲವು ಬಗೆಗಳು ಇವೆ.