ಬಿಬಿಎಂಪಿ ಮತ್ತು ವಿಧಾನಪರಿಷತ್ ಚುನಾವಣೆ ಮುಂದೂಡಿಕೆಗೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ಶುಕ್ರವಾರ ವಜಾಗೊಳಿಸಿದೆ.
ಉತ್ತರ ಕರ್ನಾಟಕ ನೆರೆ ಹಾವಳಿಯಿಂದ ತತ್ತರಿಸಿದ್ದು, ಸರ್ಕಾರದಿಂದ ಅಭಿವೃದ್ಧಿ ಕಾರ್ಯ ನಡೆಯಬೇಕಾಗಿದೆ. ಈ ಸಂದರ್ಭದಲ್ಲಿ ಚುನಾವಣೆ ನಡೆದರೆ, ಸರ್ಕಾರದ ಹಣ ಬೇರೆಡೆಗೆ ಖರ್ಚಾಗುವ ಸಾಧ್ಯತೆ ಇದೆ ಎಂಬ ಆಕ್ಷೇಪಣೆಯೊಂದಿಗೆ ಕೆ.ಜೆ.ನಾಗರಾಜ್ ಎಂಬವರು ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು.
ಚುನಾವಣೆ ನಡೆದಲ್ಲಿ ಸರ್ಕಾರದ ದೃಷ್ಟಿ ಬೇರೆಡೆಗೆ ಹೋಗುವುದಾಗಿ ಅರ್ಜಿಯಲ್ಲಿ ತಿಳಿಸಿರುವ ಅವರು, ಆ ಕಾರಣಕ್ಕಾಗಿ ಚುನಾವಣೆಯನ್ನು ಮುಂದೂಡಬೇಕೆಂದು ಕೋರಿ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಆದರೆ ಇಂದು ಹೈಕೋರ್ಟ್ ವಿಭಾಗೀಯ ಪೀಠ, ಅರ್ಜಿಯ ವಿಚಾರಣೆ ನಡೆಸಿ ಚುನಾವಣೆ ಮುಂದೂಡಲು ಸಾಧ್ಯವಿಲ್ಲ ಎಂದು ಹೇಳಿದೆ. ಸರ್ಕಾರ ಈಗಾಗಲೇ ದಿನಾಂಕ ನಿಗದಿಪಡಿಸಿದೆ. ಅದರಂತೆ ಚುನಾವಣೆ ನಡೆಸಲು ಸರ್ಕಾರ ಸ್ವತಂತ್ರವಾಗಿದೆ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.